Site icon Suddi Belthangady

ಬೆಳ್ತಂಗಡಿ: ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಾಲೋಚನಾ ಸಭೆ-ಸಂಚಾಲಕರಾಗಿ ಅಬ್ದುಲ್ ಖಾದರ್ ನಾವೂರು

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ಹಾಗೂ ಶಿಕ್ಷಣದ ಖಾತರಿಗಾಗಿ ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಪ್ರತಿ ವರ್ಷವೂ ನಡೆಯುತ್ತಾ ಬಂದಿರುತ್ತದೆ. ಬೆಳ್ತಂಗಡಿ ತಾಲೂಕಿನಲ್ಲಿ 2025 -26ನೇ ಸಾಲಿನ ಈ ಮಾಸೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ನ. 3ರಂದು ಗುರುವಾಯನಕೆರೆ ಶ್ರೀ ಗುರು ನಿವಾಸದಲ್ಲಿ ಸಮಾಲೋಚನ ಸಭೆಯನ್ನು ನಡೆಸಲಾಯಿತು

ಈ ಸಮಾಲೋಚನ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮುದಾಯಕ್ಕೆ ಜನಪ್ರತಿನಿಧಿಗಳಿಗೆ ಇಲಾಖೆ ಅಧಿಕಾರಿಗಳಿಗೆ ವಿವಿಧ ಹಂತಗಳಲ್ಲಿ ಮಕ್ಕಳ ಹಕ್ಕುಗಳ ಕುರಿತಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು.

2025- 26ನೇ ಸಾಲಿನ ಬೆಳ್ತಂಗಡಿ ತಾಲೂಕಿನ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕರಾಗಿ ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜ್ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ಸಾಹಿತಿ ಅತ್ರಾಡಿ ಅಮೃತ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಮಚ್ಚಿನ, ಬೆಳ್ತಂಗಡಿ ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಕೋಶಾಧಿಕಾರಿ ಅಶ್ರಫ್ ನಿಟ್ಟಡೆ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನಜೀರ್, ಬೆಳ್ತಂಗಡಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯೆ ಸುಧಾಮಣಿ ಆರ್., ಜಲಜಾಕ್ಷಿ ಗುರುವಾಯನಕೆರೆ, ನವೀನ್ ಪೂಜಾರಿ ಮೇಲಂತಬೆಟ್ಟು ಮಲ್ಲಿಕಾ ಆರ್., ಸಿ. ಕೆ. ಚಂದ್ರಕಲಾ, ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ಗೌರವ ಅಧ್ಯಕ್ಷ ರಮಾನಂದ ಸಾಲಿಯಾನ್, ಬೆಳ್ತಂಗಡಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷ ಶ್ರೀಧರ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ನ. 14ರಂದು ಬೆಳ್ತಂಗಡಿ ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕ ಮೊಹಮ್ಮದ್ ರಫೀಕ್ ದರ್ಬೆ, ಪಡಿ ಸಂಸ್ಥೆಯ ಸಂಯೋಜಕಿ ಕಸ್ತೂರಿ ಬೊಳುವಾರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

Exit mobile version