Site icon Suddi Belthangady

ಕುದ್ರಡ್ಕ: ಒಂದೇ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ಕನ್ನಡಿ ಹಾವು ಕಡಿತ

ತಣ್ಣೀರುಪಂತ: ಒಂದೇ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ವಿಷ ಪೂರಿತ ಹಾವೊಂದು ಕಚ್ಚಿ ಪ್ರಾಣಾಪಾಯದ ಭೀತಿ ಮೂಡಿಸಿದ್ದ ಘಟನೆ ನ.1ರಂದು ರಾತ್ರಿ ಬೆಳ್ತಂಗಡಿ ತಾಲೂಕು ಕುದ್ರಡ್ಕ ಎಂಬಲ್ಲಿ ಸಂಭವಿಸಿದೆ.

ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಎಂಬವರ ಮನೆಯಲ್ಲಿ ಅವರ ಮಗ ದಕ್ಷಿತ್, ಅವರ ಅಕ್ಕನ ಮಕ್ಕಳಾದ ವಿಶ್ಮಿತಾ ಮತ್ತು ಅನ್ವಿತಾ ಎಂಬವರು ಒಂದೇ ಕೋಣೆಯಲ್ಲಿ ಮಲಗಿದ್ದು, ರಾತ್ರಿ 11.30ರ ಸುಮಾರಿಗೆ ಕೋಣೆಯೊಳಗೆ ಪ್ರವೇಶಿಸಿದ್ದ ವಿಷಪೂರಿತ ಕನ್ನಡಿ ಹಾವು ದಕ್ಷಿತ್ ರವರ ಎರಡೂ ಕೈಗಳಿಗೆ ಕಚ್ಚಿದ್ದು, ವಿಶ್ಮಿತಾ ಹಾಗೂ ಅನ್ವಿತಾ ರವರ ಕೈಗೂ ಕಚ್ಚಿತ್ತು. ಮಕ್ಕಳು ಭೀತಿಯಿಂದ ಕಂಗೆಟ್ಟಿದ್ದರು. ಮಕ್ಕಳನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಅನಿವಾರ್ಯತೆ ಮೂಡಿದಾಗ, ಉಪ್ಪಿನಂಗಡಿಯನ್ನು ಸಂಪರ್ಕಿಸುವ ಗುರುವಾಯನ ಕೆರೆ – ಉಪ್ಪಿನಂಗಡಿ ರಸ್ತೆಯ ದುಸ್ಥಿತಿಯಿಂದಾಗಿ ಆಸ್ಪತ್ರೆ ತಲುಪುವುದು ವಿಳಂಬವಾಗಿ ಅಪಾಯಕಾರಿಯಾಗುವ ಸಾಧ್ಯತೆ ಇರುವುದರಿಂದ ಕಂಗೆಟ್ಟ ಮನೆಯವರು ತಣ್ಣೀರುಪಂತ ಗ್ರಾಮದಲ್ಲಿನ ನಾಟಿ ವೈದ್ಯ ಸೂರಪ್ಪ ಪೂಜಾರಿ ರವರ ಮನೆ ಬಾಗಿಲು ತಟ್ಟಿದ್ದರು.

ಮಧ್ಯರಾತ್ರಿ ಹಾವು ಕಡಿತಕ್ಕೊಳಗಾಗಿ ಮನೆಗೆ ಬಂದ ಮೂವರು ಮಕ್ಕಳಿಗೂ ಪ್ರಾಥಮಿಕ ಚಿಕಿತ್ಸೆನೀಡಿದ ನಾಟಿವೈದ್ಯ ಸೂರಪ್ಪ ಪೂಜಾರಿ (77 ವ.) ಅವರು ತಾವು ಪರಂಪರಾಗತವಾಗಿ ಹೊಂದಿದ್ದ ಔಷಧಿಯನ್ನು ಮಕ್ಕಳಿಗೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ.

Exit mobile version