Site icon Suddi Belthangady

ಮುಂಡಾಜೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಮುಂಡಾಜೆ: ‘ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ವೈಶಿಷ್ಟ್ಯಪೂರ್ಣ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯಿದೆ. ಕರ್ನಾಟಕಕ್ಕೂ ಅಭೂತಪೂರ್ವ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಯ ಸೊಗಡಿದೆ. ರಾಜ್ಯದ ಐಕ್ಯತೆಯನ್ನು ತಿಳಿಸುವ, ಭಾಷಾ ಸೊಗಡನ್ನು ಸಾರುವ, ಸಂಸ್ಕೃತಿಯನ್ನು ಸ್ಮರಿಸುವ ನ.ರಂದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ದಿನವಾಗಲಿ’ ಎಂದು ಪತ್ರಕರ್ತ. ಬಳಂಜ ಶಿಕ್ಷಣ ಟ್ರಸ್ಟ್ ನ ಅದ್ಯಕ್ಷ ಮನೋಹರ್ ಬಳಂಜ ಹೇಳಿದರು.

ಅವರು ಮುಂಡಾಜೆ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ್‌ರಚನೆಯಾದಾಗ ಮೈಸೂರು ಪ್ರಾಂತ್ಯಕ್ಕೆ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಸೇರಿಸಲಾಯಿತು. 1956 ನ. 1ರಂದು ಭಾಷಾವಾರು ರಾಜ್ಯಗಳಾಗಿ ರೂಪುಗೊಂಡ ಸಂದರ್ಭ ಮೈಸೂರು ರಾಜ್ಯವಾಗಿ ನಾಮಕರಣಗೊಂಡ ಈ ರಾಜ್ಯ 1973 ನವೆಂಬರ್ 1 ರಂದು ಕರ್ನಾಟವೆಂದು ಮರುನಾಮಕರಣಗೊಂಡಿತು. ಈ ದಿನ ಸದಾ ಸ್ಮರಣೀಯ, ಸಂಭ್ರಮದ ದಿನವಾಗಿರಬೇಕು’ ಎಂದರು.

ಕನ್ನಡ ರಾಜ್ಯೋತ್ಸವ ಕೇವಲ ಹಬ್ಬವಲ್ಲ. ಅದನ್ನು ನಾವು ನಮ್ಮ ಭಾಷೆ, ಸಂಸ್ಕೃತಿ ಮತ್ತು ಗುರುತಿನ ಸಂಕೇತವನ್ನಾಗಿ ಆಚರಿಸಬೇಕು. ಕನ್ನಡ ನಮ್ಮ ಅಸ್ಮಿತೆ. ನಾವು ಕನ್ನಡಿಗರೆಂಬ ಗೌರವ ಸದಾ ನಮ್ಮ ಜೊತೆಯಿರಬೇಕು. ಪ್ರಪಂಚದ. ಯಾವ ಊರಿಗೆ ಹೋದರೂ ಅದೆಲ್ಲದಕ್ಕಿಂತ ನಮ್ಮೂರೆ ಮೇಲು ಎಂಬ ಭಾವನೆ ನಮ್ಮಲ್ಲಿ ಬರುತ್ತದೆ’ ಎಂದರು. ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀದರ ಜಿ. ಎನ್. ಮಾತನಾಡಿ, ‘ಕನ್ನಡದ ಪರಂಪರೆ, ಸಾಹಿತ್ಯ, ಕಲೆ, ಸಂಗೀತ ಮತ್ತು ವಿಜ್ಞಾನದಲ್ಲಿ ನಮ್ಮ ಹಿರಿಯರು ಮಾಡಿದ ಕೊಡುಗೆಯನ್ನು ನೆನೆದು ಗೌರವಿಸ ದಿನವೇ ಕನ್ನಡ ರಾಜ್ಯೋತ್ಸವ. ಈ ಆಚರಣೆ ನಮ್ಮಲ್ಲಿ ಭಾಷಾ ಪ್ರೇಮ, ರಾಜ್ಯಾಭಿಮಾನ ಮತ್ತು ಸಾಂಸ್ಕೃತಿಕ ಏಕತೆ ಬೆಳೆಸುವ ಉದ್ದೇಶವನ್ನು ಹೊಂದಿದೆ. ತಾಂತ್ರಿಕ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ದಿನವು ಕನ್ನಡವನ್ನು ಉಳಿಸುವ ಮತ್ತು ಬೆಳಸುವ ನವಚೇತನವನ್ನು ನೀಡಲು ಕರ್ನಾಟಕದ ಹುಟ್ಟುಹಬ್ಬವನ್ನು ಆಚರಿಸಬೇಕು’ ಎಂದರು.

ರಾಜ್ಯೋತ್ಸವದ ಆಚರಣೆಯು ಕೇವಲ ಧ್ವಜಾರೋಹಣ, ಶೋಭಾಯಾತ್ರೆ ಅಥವಾ ನೃತ್ಯಗಳಿಗೆ ಸೀಮಿತವಾಗಬಾರದು. ಅದಕ್ಕಿಂತಲೂ ಹೆಚ್ಚು ಕನ್ನಡ ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ನಾವು ಕೈಜೋಡಿಸಬೇಕು. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಮಾತನಾಡುವ ಜೊತೆಗೆ ಕನ್ನಡ ಕವನ, ನಾಟಕ, ಚರ್ಚೆ ಮತ್ತು ಕಾವ್ಯ ವಾಚನಗಳ ಮೂಲಕ ಭಾಷೆಯ ಮೇಲೆ ಪ್ರೀತಿ ತೋರಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಉತ್ತೇಜಿಸಲು, ಎಲ್ಲಾ ಪತ್ರವ್ಯವಹಾರ, ಫಲಕಗಳು ಮತ್ತು ಪ್ರಕಟಣೆಗಳು, ಭಾಷೆ ಕನ್ನಡದಲ್ಲಿರಬೇಕು ಎಂದರು.

‘ಸಾಮಾಜಿಕ ಮಾಧ್ಯಮದಲ್ಲಿ ಕನ್ನಡದಲ್ಲಿ ಬರೆಯುವ, ಮಾತನಾಡುವ ಮತ್ತು ಕನ್ನಡ ಸಾಹಿತ್ಯವನ್ನು ಉಳಿದ ಭಾಷೆಗಳ ಜೊತೆ ಹಂಚಿಕೊಳ್ಳುವ ಮೂಲಕ ಯುವ ಸಮುದಾಯ ಕನ್ನಡ ಭಾಷೆಯ ಗೌರವವನ್ನು ಕಾಪಾಡಬಹುದು. ಕನ್ನಡದ ಸಾಹಿತ್ಯವನ್ನು ಇತರ ಭಾಷೆಗಳಿಗೂ, ಇತರ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೂ ಭಾಷಾಂತರ ಮಾಡುವ ಕಾರ್ಯ ಕೂಡಾ ಉತ್ತಮವಾದುದೇ. ರೀಲ್ಸ್ ಗಳಲ್ಲಿ ಕನ್ನಡ ಹಾಡುಗಳನ್ನು ಉಪಯೋಗಿಸುವುದು ಕೂಡಾ ಪ್ರಯೋಜನಕಾರಿಯಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡದ ಜನಪದ, ಯಕ್ಷಗಾನ, ದಾಸರಪದ, ಕಾವ್ಯ ಹಾಗೂ ಇತರ ಕಲೆಗಳ ಪ್ರದರ್ಶನದ ಮೂಲಕ ಕನ್ನಡ ಸಂಸ್ಕೃತಿಯ ವೈವಿಧ್ಯತೆಯನ್ನು ವಿವಿಧ ಜನರಿಗೆ ತೋರಿಸಬೇಕು’ ಎಂದರು

‘ನಾವು ಯಾವ ಕ್ಷೇತ್ರದಲ್ಲಿದ್ದರೂ ಕನ್ನಡವನ್ನು ಹೆಮ್ಮೆಯಿಂದ ಬಳಸಬೇಕು. ಕನ್ನಡದಲ್ಲಿ ಮಾತನಾಡುವುದು, ಬರೆಯುವುದು, ಓದುವುದು ನಮ್ಮ ಕರ್ತವ್ಯ. ನಮ್ಮ ಮಕ್ಕಳಿಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಪ್ರೋತ್ಸಾಹಿಸಬೇಕು. ಮನೆಯಲ್ಲಿ ಮಾತೃಭಾಷೆ ಬಳಸಿ, ಮುಂದಿನ ಪೀಳಿಗೆಗೆ ಉಳಿಸಬೇಕು. ಕನ್ನಡ ಕಲಾವಿದರು, ಲೇಖಕರು, ಚಿತ್ರರಂಗ ಮತ್ತು ಸ್ಥಳೀಯ ಉತ್ಪನ್ನಗಳನ್ನು ಬಳಸಿ ಅವುಗಳ ಉಳಿವಿಗೆ ಪ್ರೋತ್ಸಾಹ ನೀಡುವುದು ಕನ್ನಡಿಗರ ಕರ್ತವ್ಯ. ಕನ್ನಡ ಭಾಷೆಯ ಅಧಿಕೃತ ಸ್ಥಾನಮಾನವನ್ನು ಕಾಪಾಡಲು, ಸರ್ಕಾರದ ಎಲ್ಲಾ ಮಟ್ಟಗಳಲ್ಲಿ ಕನ್ನಡದ ಬಳಕೆಯನ್ನು ಖಚಿತಪಡಿಸಿ ಅದರೊಡನೆ ನಾವಿರುವುದು ಅನಿವಾರ್ಯ. ಕನ್ನಡವನ್ನು ಕೇವಲ ಭಾಷೆಯಾಗಿ ನೋಡದೆ, ಅದು ನಮ್ಮ ಆತ್ಮ, ಸಂಸ್ಕೃತಿ ಮತ್ತು ಅಸ್ತಿತ್ವ ಎಂದು ಮನಗಾಣಬೇಕಾಗಿದೆ.’

ಕವಿಗಳು ಕರ್ನಾಟಕದ ಮಹತ್ವವನ್ನು ಅದೆಷ್ಟು ಚೆನ್ನಾಗಿ ಸಾರಿ, ಸಾರಿ ಹಾಡಿದ್ದಾರೆ. ನಾವೆಲ್ಲರೂ ಕನ್ನಡಿಗರಾಗಿರುವುದಕ್ಕೆ ಹೆಮ್ಮೆ ಪಟ್ಟು, ಕನ್ನಡದ ಗೌರವವನ್ನು ಕಾಪಾಡುವ ನಿಜವಾದ ಕರ್ನಾಟಕದ ನಾಗರಿಕರಾಗೋಣ. ನಿತ್ಯ ಬದುಕಿನಲ್ಲಿ ಕನ್ನಡ ಮಾತನಾಡೋಣ, ಕನ್ನಡ ಉಳಿಸೋಣ ಎಂದರು.

ಅಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿ ನಾಯಕ ವೀರೇಶ್ ವಹಿಸಿದ್ದರು. ಶಿಕ್ಷಕಿ ರೋಹಿನಿ ಆರ್. ಜಿ. ಸ್ವಾಗತಿಸಿ, ತನ್ವಿತ್ ಕೆ. ಕಾರ್ಯಕ್ರಮ ನಿರೂಪಿಸಿದರು. ತನ್ವಿತ್ ವಂದಿಸಿದರು.

Exit mobile version