Site icon Suddi Belthangady

ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅ. 24 ರಿಂದ 25 ರವರೆಗೆ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ
ವಿ. ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಿತು. ಶಿಬಿರವನ್ನು ಉಜಿರೆ ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಇವರು ಉದ್ಘಾಟಿಸಿ ಬಳಿಕ ಮಾತನಾಡುತ್ತಾ, 58 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಹೆಗ್ಗಡೆ ಅವರ ಚತುರ್ವಿದ ದಾನಗಳನ್ನು ದೇಶಾದ್ಯಂತ ವಿಸ್ತರಿಸಿದರು.

ಜನರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ 50 ವರ್ಷಗಳ ಹಿಂದೆ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಸ್ಥಾಪಿಸಿ ಸಂಚಾರಿ ಆಸ್ಪತ್ರೆಯ ಮೂಲಕ ಹಳ್ಳಿಯ ಜನತೆಯ ಆರೋಗ್ಯ ರಕ್ಷಣೆಗೆ ಒಂದು ನೂತನ ವ್ಯವಸ್ಥೆ ಕಲ್ಪಿಸಿದರು. ಉಜಿರೆಯಂತಹ ಗ್ರಾಮೀಣ ಭಾಗದಲ್ಲಿ ಎಸ್.ಡಿ.ಎಂ ಆಸ್ಪತ್ರೆಯನ್ನು ನಿರ್ಮಿಸಿ ದೂರದ ದುರ್ಗಮ ದಾರಿ ಇರುವ ಮಂಗಳೂರಿಗೆ ರೋಗಿಗಳು ಅಲೆದಾಡುವ ಸಂಕಷ್ಟವನ್ನು ಪೂಜ್ಯರು
ನಿವಾರಿಸಿದರು.

ಹೆಗ್ಗಡೆ ಅವರ ಆಶಯದಂತೆ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸೇವೆ ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ್ ಅವರು ಮಾತನಾಡಿ ಸಮಾಜಕ್ಕೆ ಸದುಪಯೋಗವಾಗುವ ಯಾವ ಕಾರ್ಯವಿದ್ದರೂ ಪೂಜ್ಯರು ಅತ್ಯಂತ ಆಸಕ್ತಿಯಿಂದ ಅನುಮತಿ ನೀಡುವುದರಿಂದ ನಮಗೆ ಇಂತಹ ಉಚಿತ ಶಿಬಿರಗಳನ್ನು ನಡೆಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೂಳೆಯ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತಿರುವುದರಿಂದ ಈ ದಿನ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನಮ್ಮಲ್ಲಿ 5 ಮಂದಿ ಮೂಳೆ ಚಿಕಿತ್ಸಾ ತಜ್ಞರಿದ್ದು ಇಲ್ಲಿ ಮೂಳೆಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ಈ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ನುರಿತ ತಜ್ಞ ವೈದ್ಯರಿದ್ದು, ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಕೂಡ ಯಶಸ್ವಿಯಾಗಿ
ಮಾಡಲಾಗುತ್ತಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಮತ್ತು ಮೂಳೆ ಚಿಕಿತ್ಸಾ ತಜ್ಞ ಡಾ| ದೇವೇಂದ್ರ ಕುಮಾರ್. ಪಿ, ಮೂಳೆ ಚಿಕಿತ್ಸಾ ತಜ್ಞ ಡಾ| ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್, ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ. ಅವರು ಮೂಳೆ ಸಾಂದ್ರತೆ ತಪಾಸಣೆಯ ಬಗ್ಗೆ ವಿವರಿಸಿದರು.

ಈ ಶಿಬಿರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್., ಡಾ| ದೇವೇಂದ್ರ ಕುಮಾರ್. ಪಿ., ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ ಭಾಗವಹಿಸಿ ರೋಗಿಗಳ ತಪಾಸಣೆ ನಡೆಸಿದರು.

ಶಿಬಿರದಲ್ಲಿ ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್‌ರೇ, ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ 10% ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ
ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ ೨೦% ರಿಯಾಯಿತಿ, ಔಷಧದಲ್ಲಿ
10% ರಿಯಾಯಿತಿ ನೀಡಲಾಯಿತು.

ಶಿಬಿರದಲ್ಲಿ 425 ಮಂದಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು. ಆಸ್ಪತ್ರೆಯ ಸ್ಟೋರ್ ಮೆನೇಜರ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ ಹಾಗೂ ಸಂಪರ್ಕಾಧಿಕಾರಿ ಚಿದಾನಂದ ಸಹಕರಿಸಿದರು.

Exit mobile version