ಬೆಳ್ತಂಗಡಿ: ಪಟ್ಟಣ ಪಂಚಾಯತ್ ಹಾಗೂ ಹಿಂದೂ ರುದ್ರಭೂಮಿ ಸಮಿತಿಯ ಸಹಯೋಗದೊಂದಿಗೆ ಹಿಂದೂ ರುದ್ರ ಭೂಮಿ ಲೋಕಾರ್ಪಣೆ ಅ.27ರಂದು ಶಾಸಕ ಹರೀಶ್ ಪೂಂಜ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕ ಹರೀಶ್ ಪೂಂಜ ರುದ್ರಭೂಮಿಯ ಲೋಕಾರ್ಪಣೆ ಮಾಡುವಲ್ಲಿ ಪಟ್ಟಣ ಪಂಚಾಯತ್ ನ ಆಡಳಿತ ಮಂಡಳಿಯ ಕಾರ್ಯವೈಖರಿ ಮೆಚ್ಚುವಂತಹದ್ದು. ರುದ್ರಭೂಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಶ್ರಮದಿಂದ, ಬೆಳ್ತಂಗಡಿಯ ಉದ್ಯಮಿಗಳ ಸಹಕಾರದಿಂದ ರುದ್ರಭೂಮಿ ಲೋಕಾರ್ಪಣೆಗೊಂಡಿದೆ. ಹಿಂದೂ ಸಮಾಜದಲ್ಲಿ ದೇವಸ್ಥಾನದಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವುದು ರುದ್ರಭೂಮಿಗಳು. ಅಂತ್ಯ ಸಂಸ್ಕಾರದ ಕ್ರಿಯೆಗಳನ್ನು ನೆರವೇರಿಸಲು ಪೂರಕವಾದ ರುದ್ರಭೂಮಿ ನಿರ್ಮಾಣಗೊಂಡಿರುವುದು ಅವಶ್ಯಕವಾಗಿದೆ ಎಂದರು.
ಪಟ್ಟಣ ಪಂಚಾಯಿತ್ ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ, ನಾಗರೋತ್ಥಾನ ಹಂತ 4ರ ಅನುದಾನದ 40ಲಕ್ಷ ರೂ ಅನುದಾನದಲ್ಲಿ, ತಾಲೂಕಿನ ಉದ್ಯಮಿಗಳ ಹಾಗೂ ಗಣ್ಯರ ಸಹಕಾರದಲ್ಲಿ ಲೋಕಾರ್ಪಣೆಗೊಂಡ ರುದ್ರಭೂಮಿಗೆ ಎಲ್ಲರ ಸಹಕಾರ ನೀಡಿರುವುದಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಗೌರಿ, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಶೆಟ್ಟಿ, ವಾರ್ಡ್ ಸಮಿತಿಯ ಸದಸ್ಯ ರಜನಿ ಕುಡ್ವ, ಬೆಳ್ತಂಗಡಿ ಹಿಂದೂ ರುದ್ರ ಭೂಮಿಯ ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯರಾದ , ತುಳಸಿ, ಅಂಬರೀಷ್, ಲೋಕೇಶ್ ಹಾಗೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿ, ಬೆಳ್ತಂಗಡಿ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಹಿಂದೂ ರುದ್ರ ಭೂಮಿ ಸಮಿತಿಯ ಅಧ್ಯಕ್ಷ ಶಶಿಧರ ಪೈ ಧನ್ಯವಾದವಿತ್ತರು.

