Site icon Suddi Belthangady

ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಆಟದ ಆಲಯ ಲೋಕಾರ್ಪಣೆ-ಪವರ್ ಪ್ಲೇ -2025:ಪಾಲಕರಿಗೆ ಕ್ರೀಡಾ ಕೂಟ

ಗುರುವಾಯನಕೆರೆ: ಆಟ – ಪಾಠಗಳೆಲ್ಲಾ ಸೇರಿದರೆ ಮಾತ್ರ ವಿದ್ಯಾರ್ಥಿಯ ಬದುಕಿಗೆ ಅರ್ಥ. ಬರೇ ಪಾಠ – ಪ್ರವಚನಗಳು ಪೂರ್ಣತೆಯನ್ನು ನೀಡಲಾರವು. ನಾಲ್ಕು ಗೋಡೆಗಳ ನಡುವೆ ಕಲಿಯಲಾಗದ್ದನ್ನು ಮಕ್ಕಳು ಆಟದ ಮೈದಾನದಲ್ಲಿ ಕಲಿಯಬಹುದು. ನಾಲ್ಕು ಜನರ ಮಧ್ಯೆ ತಿಳಿಯಬಹುದು ಎಂದು ಅರಮಲೆಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು ಅವರು ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ನೂತನವಾಗಿ ನಿರ್ಮಾಣ ಮಾಡಿದ ‘ ಎಕ್ಸೆಲ್ ಫನ್ ಫಿನಿಟಿ ” – ಮಕ್ಕಳ ಹೊರಾಂಗಣ ಆಟದ ಆಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಯಂಗ್ ಚಾಲೆಂಜರ್ಸ್ ಆಫ್ ಮುಂಡಾಜೆ ಇದರ ವರಿಷ್ಠರಾದ ನಾಗೇಂದ್ರ ರಾವ್ ಅವರು ಮಾತನಾಡಿ, ಎಕ್ಸೆಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಂಥದೇ ಸಾಧನೆ ಎಕ್ಸೆಲ್ ಟೆಕ್ನೋ ಸ್ಕೂಲ್ ಕೂಡಾ ಮಾಡಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ಗುಣ ಮಟ್ಟದ ಶಿಕ್ಷಣ ನೀಡುವ ದೃಷ್ಟಿಕೋನ ನಮ್ಮದು. ಇದೀಗ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಪ್ಲೇ ಹೋಮ್ ಮಾಡಲಾಗಿದೆ. ಅತ್ಯಂತ ವೈಜ್ಞಾನಿಕವಾಗಿ, ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಪ್ರಬುದ್ಧತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಇದನ್ನು ಸಂಯೋಜಿಸಲಾಗಿದೆ ಎಂದರು.

ಎಕ್ಸೆಲ್ ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಕಾಲೇಜು ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟೆಕ್ನೋ ಸ್ಕೂಲ್ ಮುಖ್ಯ ಶಿಕ್ಷಕಿ ಸಹನಾ ಜೈನ್, ಕಾಲೇಜು ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ ಸೇರಿ ಬೋಧಕ ಬೋಧಕೇತರ ಸಿಬ್ಬಂದಿ ಬಳಗ, ಪಾಲಕರು ಸಮಾರಂಭದಲ್ಲಿ ಪಾಲ್ಗೊಂಡರು.

ಶಾಲಾ ಪುಟಾಣಿಗಳು ಪ್ರಾರ್ಥಿಸಿದರು. ಶೈಕ್ಷಣಿಕ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕಿಯರಾದ ಸ್ವಾತಿ ಅತಿಥಿ ಪರಿಚಯ ಮಾಡಿದರು. ಪವಿತ್ರ ಸಹಕರಿಸಿದರು. ಗೀತಾ ನಿರೂಪಿಸಿದರು. ಚೇತನಾ ವಂದನಾರ್ಪಣೆ ಗೈದರು. ಸಮಾರಂಭದ ಬಳಿಕ ವಿದ್ಯಾರ್ಥಿಗಳ ಹೆತ್ತವರಿಗೆ ವಿವಿಧ ವಿನೋದ – ಆಟೋಟ – ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

Exit mobile version