Site icon Suddi Belthangady

ದಿಡುಪೆ ಪರಿಸರದಲ್ಲಿ ನಿರಂತರ ಕಾಡಾನೆಗಳ ದಾಳಿ

ಮಲವಂತಿಗೆ: ಗ್ರಾಮದ ದಿಡುಪೆ ಪರಿಸರದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು, ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಉಂಟು ಮಾಡುತ್ತಿರುವ ಕುರಿತು ಸ್ಥಳಿಯರು ತಿಳಿಸಿದ್ದಾರೆ.

ಅ. 26ರಂದು ರಾತ್ರಿ ಪನ್ನೋಡಿಬೈಲು ಪ್ರದೇಶದಲ್ಲಿ ಅಡಕೆ,ಬಾಳೆ ಸಹಿತ ಗದ್ದೆಗಳಿಗೆ ದಾಳಿ ಇಟ್ಟ ಕಾಡಾನೆಗಳ ಹಿಂಡು ಭಾರಿ ಪ್ರಮಾಣದಲ್ಲಿ ಕೃಷಿಹಾನಿ ಉಂಟುಮಾಡಿವೆ.

ದಿಡುಪೆ ಪರಿಸರದ ಅಡ್ಡದಕೋಡಿ, ಪೂರ್ಜೆಬೈಲ, ಕಡಮಗುಂಡಿ,ಕುಮೇರು ಮೊದಲಾದ ಪರಿಸರಗಳಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ಪ್ರತಿದಿನ ನುಗ್ಗುತ್ತಿವೆ.
ಸ್ಥಳೀಯರು ಹೇಳುವ ಪ್ರಕಾರ 10 ರಿಂದ 12 ಕಾಡಾನೆಗಳು ತೋಟಗಳಿಗೆ ದಾಳಿ ಇಡುತ್ತಿವೆ.

ಈ ಪರಿಸರಗಳಲ್ಲಿ ಹಗಲು ಹೊತ್ತು ತಿರುಗಾಟ ನಡೆಸಲು ಭಯದ ವಾತಾವರಣ ಇದೆ. ಇತ್ತೀಚಿನ ಕೆಲವು ದಿನಗಳ ಹಿಂದೆ 10ಕ್ಕಿಂತ ಅಧಿಕ ಕಾಡಾನೆಗಳು ಮೂಡಿಗೆರೆ ಕಡೆಯಿಂದ ಚಾರ್ಮಾಡಿ ಗ್ರಾಮದತ್ತ ಕಾಲಿಟ್ಟಿದ್ದವು. ಬಳಿಕ ಆನೆಗಳ ಹಿಂಡು ಇಲ್ಲಿಂದ ದಿಡುಪೆ ಪರಿಸರದತ್ತ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ದಿಡುಪೆ ಪರಿಸರದಲ್ಲಿ ಒಂಟಿ ಸಲಗ ಅಥವಾ ಮರಿಯಾನೆ ಸಹಿತ ಮೂರು ಕಾಡಾನೆಗಳು ಆಗಾಗ ಕಂಡುಬರುತ್ತವೆ. ಆದರೆ ಈ ಬಾರಿ ಹತ್ತರಿಂದ ಹೆಚ್ಚಿನ ಸಂಖ್ಯೆಯ ಆನೆಗಳು ತೋಟಗಳಿಗೆ ದಾಳಿ ನಡೆಸುತ್ತಿವೆ.

Exit mobile version