ಉಜಿರೆ: ಬೆನಕ ಹೆಲ್ತ್ ಸೆಂಟರ್ (NABH ಪುರಸ್ಕೃತ) ವತಿಯಿಂದ ಅದರ ರಜತ ಮಹೋತ್ಸವ ಮತ್ತು ದೀಪಾವಳಿ ಪ್ರಯುಕ್ತ ಸಾಂಪ್ರದಾಯಿಕ ಪೂಜೆಯೊಂದಿಗೆ ತಾಲೂಕಿನ ಆಂಬುಲೆನ್ಸ್ ವಾಹನದ ಚಾಲಕರು ಮತ್ತು ಮಾಲಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಅವರು ಮಾತನಾಡುತ್ತ ಆಂಬುಲೆನ್ಸ್ ಚಾಲಕರು ನಿಜವಾದ ಅರ್ಥದಲ್ಲಿ ಜೀವರಕ್ಷಕರು ಯಾವುದೇ ಕಾಲವಿರಲಿ, ಯಾವುದೇ ಸಮಯವಿರಲಿ ಕರೆದಾಗ ಯಾವುದೇ ಹಳ್ಳಿಯ ಮೂಲೆಯಲ್ಲೂ ಸ್ಪಂದಿಸಿ ರೋಗಿಗಳನ್ನು ಆಸ್ಪತ್ರೆಗೆ ತುರ್ತಾಗಿ ಸೇರಿಸಿ ಅವರ ಜೀವವನ್ನು ಉಳಿಸುವ ಕಾರ್ಯ ಸದಾ ಸುಸ್ತ್ಯಾರ್ಹ ಮತ್ತು ಅಭಿನಂದನೀಯ ಎಂದು ಎಲ್ಲ ಆಂಬುಲೆನ್ಸ್ ಚಾಲಕರ ಈ ಸೇವೆಯನ್ನು ಸ್ಮರಿಸಿದರು.
ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಹಿರಿಯ ಆಂಬುಲೆನ್ಸ್ ಚಾಲಕ ಅಬ್ದುಲ್ ಹಮೀದರವರನ್ನು ಶಾಲು ಹೊದಿಸಿ, ಫಲಪುಷ್ಪ & ಸ್ಮರಣಿಕೆ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಹಮೀದ್ ಅವರು ತನ್ನ ಪ್ರಾರಂಭದ ದಿನಗಳಲ್ಲಿ ಬೆನಕ ಆಸ್ಪತ್ರೆ ನೀಡಿದ ಸಹಕಾರ ಮತ್ತು ಡಾ.ಗೋಪಾಲಕೃಷ್ಣ ಅವರು ತೋರಿದ ಪ್ರೀತಿ ವಿಶ್ವಾಸವನ್ನು ನೆನಪಿಸಿಕೊಂಡು ಈ ಆಸ್ಪತ್ರೆ ಇನ್ನಷ್ಟು ಬೆಳೆದು ಇನ್ನು
ಹೆಚ್ಚಿನ ರೋಗಿಗಳ ಪಾಲಿಗೆ ವರದಾನವಾಗಲಿ ಎಂದು ಆಶಿಸಿದರು. ಬೆಳ್ತಂಗಡಿ ತಾಲೂಕಿನ 20ಕ್ಕೂ ಹೆಚ್ಚು ಆಂಬುಲೆನ್ಸ್ ಚಾಲಕರನ್ನು ಪ್ರತ್ಯೇಕವಾಗಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಭಾರತಿ ಜಿ.ಕೆ. ಮತ್ತು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಸ್.ಜಿ. ಭಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಾಗತಿಸಿ, ವಂದಿಸಿದರು.

