Site icon Suddi Belthangady

ಸೌತಡ್ಕ: ಸೇವಾಧಾಮದಲ್ಲಿ ದೀಪಾವಳಿ ಸಂಭ್ರಮ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿರುವ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಅ.20ರಂದು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಹೊಸ ಬದುಕಿನ ಉತ್ಸಾಹ ತುಂಬಿಸುವ ಉದ್ದೇಶದಿಂದ ಸೇವಾಧಾಮವು ಪ್ರತಿವರ್ಷದಂತೆ ಈ ಬಾರಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ಬೆನ್ನುಹುರಿ ಗಾಯದಿಂದ ಪೀಡಿತರಾದ ಅನೇಕರು ಸಮಾಜದಿಂದ ದೂರ ಉಳಿದು ಮನೋವೈಕಲ್ಯಕ್ಕೆ ಒಳಗಾಗುವ ಸಂದರ್ಭಗಳಲ್ಲಿ, ಅವರನ್ನು ಪುನಃ ಜೀವನದ ಹಾದಿಗೆ ತಂದು ನಿಲ್ಲಿಸುವ ಕಾರ್ಯವನ್ನು ಸೇವಾಧಾಮ ಸಂಸ್ಥೆ ಕಳೆದ ಹಲವು ವರ್ಷಗಳಿಂದ ನಿಶ್ಚಲವಾಗಿ, ನಿಸ್ವಾರ್ಥವಾಗಿ ನಿರ್ವಹಿಸುತ್ತಿದೆ. ವೈದ್ಯಕೀಯ ಸಹಾಯ, ಮಾನಸಿಕ ಪ್ರೋತ್ಸಾಹ ಮತ್ತು ಪ್ರೇರಣಾತ್ಮಕ ಚಟುವಟಿಕೆಗಳ ಮೂಲಕ ದಿವ್ಯಾಂಗರ ಜೀವನದಲ್ಲಿ ಬೆಳಕು ತುಂಬಿಸುವ ಈ ಸಂಸ್ಥೆಯ ಸಾಮಾಜಿಕ ಬದ್ಧತೆ ಶ್ಲಾಘನೀಯವಾಗಿದೆ.

ಈ ಸಂದರ್ಭ ಮಂಗಳೂರು ಸಿಆರ್ 3 (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಸೀನಿಯರ್ ಎಚ್‌ಆರ್ ಎಕ್ಸಿಕ್ಯೂಟಿವ್ ಗಣೇಶ್ ಟಿ. ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ದೀಪಾವಳಿ ಹಬ್ಬದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮಹತ್ವವನ್ನು ವಿವರಿಸಿದರು. ದೀಪಾವಳಿ ಕೇವಲ ಬೆಳಕಿನ ಹಬ್ಬವಲ್ಲ, ಅದು ಅಂಧಕಾರದಿಂದ ಬೆಳಕಿನತ್ತ ಸಾಗುವ ಪ್ರಯಾಣದ ಸಂಕೇತವಾಗಿದೆ. ಇಂತಹ ಹಬ್ಬಗಳು ನಮ್ಮೊಳಗಿನ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯಾಂಗರಾದ ಫಲಾನುಭವಿಗಳು, ಆರೈಕೆದಾರರು ಹಾಗೂ ಸಿಬ್ಬಂದಿಗಳು ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ನೃತ್ಯ ಪ್ರದರ್ಶನಗಳ ಮೂಲಕ ದೀಪಾವಳಿಯ ಸಂಭ್ರಮವನ್ನು ಹಂಚಿಕೊಂಡರು. ವೇದಿಕೆಯ ಮೇಲೆ ಅವರ ಉತ್ಸಾಹ ಮತ್ತು ನಗು ಮುಖಗಳನ್ನು ಕಂಡು ಎಲ್ಲರೂ ಭಾವನಾತ್ಮಕಗೊಂಡರು.

ಈ ಸಂದರ್ಭದಲ್ಲಿ ಮುಂಡಾಜೆಯ ವಿಧ್ಯಾ ಬೆಂಡೆಯವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸೇವಾಧಾಮಕ್ಕೆ ದೇಣಿಗೆಯನ್ನು ನೀಡಿ ಮಾನವೀಯತೆಯ ಅರ್ಥವನ್ನು ಹೊಸದಾಗಿ ಸಾರಿದರು. ನಂತರ ಅಮೃತಗಳಿಗೆಯಲ್ಲಿ ಅಮೃತ ಹಸ್ತದಲ್ಲಿ ಹಣತೆಯನ್ನು ಹಚ್ಚಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿಯ ಆನಂದವನ್ನು ಎಲ್ಲರೂ ಸೇರಿ ಹಂಚಿಕೊಂಡರು.

ಸಮಾರಂಭದಲ್ಲಿ ಮುಂಡಾಜೆಯ ವಿಶ್ವನಾಥ್ ಬೆಂಡೆ, ಸೇವಾಧಾಮ ಸಂಸ್ಥಾಪಕ ಕೆ.ವಿನಾಯಕ ರಾವ್, ಸಂಸ್ಥೆಯ ದಾನಿಗಳು, ಹಿತೈಷಿಗಳು, ಸಲಹಾ ಸಮಿತಿಯ ಸದಸ್ಯರು, ಟ್ರಸ್ಟಿಗಳು, ಫಲಾನುಭವಿಗಳು, ಸನಿವಾಸಿಗಳು, ಆರೈಕೆದಾರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಒಟ್ಟಾರೆ ಸುಮಾರು 70 ಮಂದಿ ಈ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಸೇವಾಧಾಮದ ಫಿಸಿಯೊಥೆರಪಿಸ್ಟ್ ವಿಖ್ಯಾತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೇವಾಭಾರತಿಯ ಫಂಡ್ ರೈಸಿಂಗ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಆಶ್ರಿತ್ ಸಿ.ಪಿ. ವಂದಿಸಿದರು.

Exit mobile version