Site icon Suddi Belthangady

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆ ಮುಖ್ಯಸ್ಥರಾಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಶಸ್ತ್ರಾಸ್ತ್ರ ಕಾಯ್ದೆಯಡಿಯ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಮೂಲದ ಚಿನ್ನಯ್ಯನಿಗೆ ಆಶ್ರಯ ನೀಡಿದ ವಿಚಾರದಲ್ಲಿ ಮಹೇಶ್ ಶೆಟ್ಟಿ ಅವರ ತಿಮರೋಡಿಯ ಮನೆಯಲ್ಲಿ ಮಹಜರು ನಡೆಸಿದ ವೇಳೆ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಎಸ್.ಐ.ಟಿ.ಯ ಎಸ್ಪಿ ಸಿ.ಎ.ಸೈಮನ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲಾಗಿತ್ತು.

ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ಅವರಿಗೆ ನೊಟೀಸ್ ಜಾರಿ ಮಾಡಿದ್ದರು. ನಂತರ ಭೂಗತರಾಗಿದ್ದ ಮಹೇಶ್ ಶೆಟ್ಟಿ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು.

ಬಳಿಕ ತನ್ನ ಮೇಲಿನ ಈ ಪ್ರಕರಣದ ಎಲ್ಲಾ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡುವಂತೆ ಮಹೇಶ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಮಹೇಶ್ ಶೆಟ್ಟಿ ಅವರ ಅರ್ಜಿ ಪುರಸ್ಕರಿಸಿ ತೀರ್ಪು ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್.ಗೆ ತಡೆಯಾಜ್ಞೆ ನೀಡಿದ್ದಾರೆ.

ಮಹೇಶ್ ಶೆಟ್ಟಿ ಪರ ವಕೀಲರಾದ ತಾರನಾಥ ಪೂಜಾರಿ ಮೂಡಬಿದ್ರೆ, ಎಂ.ಆರ್.ಬಾಲಕೃಷ್ಣ ಸುಳ್ಯ ಮತ್ತು ಮೋಹಿತ್ ಕುಮಾರ್ ಪುತ್ತೂರು ವಾದಿಸಿದ್ದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಹೊರಡಿಸಿರುವ ಆದೇಶದ ವಿಚಾರದಲ್ಲಿ ಈಗಾಗಲೇ ಹೈಕೋರ್ಟ್ ಮಹೇಶ್ ಶೆಟ್ಟಿ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.

Exit mobile version