Site icon Suddi Belthangady

ಉಜಿರೆ: ಶ್ರೀ ಧ. ಮಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ (ಬಿ.ಎಡ್.) ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಿದ್ಯಾಶ್ರೀ ಅವರು ಮಾತನಾಡಿ, ಶ್ರಮ, ನಿಷ್ಠೆ, ಶಿಸ್ತು ಜೀವನದ ಯಶಸ್ಸಿಗೆ ಕಾರಣವಾಗುತ್ತದೆ. ಆತ್ಮವಿಶ್ವಾಸ, ಛಲ ಇದ್ದಾಗ ಯಾವುದೇ ಸಾಧನೆ ಮಾಡಬಹುದು ಎಂದರು.

ವಿದ್ಯಾರ್ಥಿ ಸಂಘಟನೆಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಉನ್ನತ ಹುದ್ದೆಯನ್ನು ಹಾಗೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಆತ್ಮಸ್ಥೈರ್ಯ ಬರುತ್ತದೆ ಎಂದು ಅವರು ಹೇಳಿದರು. ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ, ಶುಭಕೋರಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 58ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ಕ್ವಿಜ್, ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು. ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿ ಸಂಘದ ನಾಯಕಿ ಅಪೇಕ್ಷಾ ಹಾಗೂ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Exit mobile version