Site icon Suddi Belthangady

ಉಜಿರೆ: ಶ್ರೀ ಧ. ಮಂ. ಸೆಕಂಡರಿ ಶಾಲೆಯಲ್ಲಿ ನೆಟ್ ಬಾಲ್ ಪಂದ್ಯಾಟ

ಉಜಿರೆ: ಪ್ರಾಥಮಿಕ, ಪ್ರೌಢ ಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟ “ಕ್ರೀಡೆಯಿಂದ ದೈಹಿಕ ಕ್ಷಮತೆ ಹಾಗೂ ಉದ್ಯೋಗಾವಕಾಶ” ಕ್ರೀಡಾಪಟುಗಳು ಕೇವಲ ಸ್ಪರ್ಧೆಗಾಗಿ ಆಡದೆ, ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕ್ರೀಡೆಯಲ್ಲಿ ತೊಡಗಿಕೊಂಡಾಗ ದೈಹಿಕ ಕ್ಷಮತೆ ವೃದ್ಧಿಯಾಗುವುದಲ್ಲದೆ ಉದ್ಯೋಗಾವಕಾಶಕ್ಕೂ ಪ್ರಯೋಜನವಾಗುತ್ತದೆ ಎಂದು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಅಭಿಪ್ರಾಯಪಟ್ಟರು.

ಅವರು ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅ.16ರಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ ಬಾಲಕಿಯರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ (ಆಡಳಿತ), ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲೆಯ ಸಹಯೋಗದೊಂದಿಗೆ ಪಂದ್ಯಾಟ ಆಯೋಜಿಸಲಾಗಿತ್ತು.

ಮಕ್ಕಳು ದೇಶಕ್ಕೆ ಆಸ್ತಿಯಾಗಬೇಕು. ಸ್ಪರ್ಧೆಯಲ್ಲಿ ಸೋತರೆ ನಿರಾಶರಾಗದೆ ಮುಂದಿನ ಗೆಲುವಿನ ಕಡೆಗೆ ಪ್ರಯತ್ನಶೀಲರಾಗಬೇಕು ಎಂದ ಅವರು, ಇಲ್ಲಿಯ ಕ್ರೀಡಾಳುಗಳು ಮುಂಚೂಣಿಯಲ್ಲಿ ಒಲಿಂಪಿಕ್ಸ್ ವರೆಗೆ ಸಾಧನೆ ಮೆರೆದು ಕೀರ್ತಿ ತಂದಿದ್ದಾರೆ. ಇಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಗ್ರಾಮ ಪಂಚಾಯತ್ ಗೆ ಹೆಮ್ಮೆ. ಕ್ರೀಡಾಳುಗಳಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರೋತ್ಸಾಹ ಅಪಾರ ಎಂದು ಹೇಳಿದರು.

ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿಯೂ ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರಯತ್ನಿಸಿದಲ್ಲಿ ಉನ್ನತ ಸಾಧನೆ ಸಾಧ್ಯವಾಗುತ್ತದೆ ಎಂದರು.

ಪಂದ್ಯಾಟದ ಸಂಯೋಜಕ ಪ್ರೇಮನಾಥ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಕೆ. ಶುಭ ಕೋರಿದರು. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸುರೇಶ್ ಕೆ. ಅವರನ್ನು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು. ಸನ್ಮಾನಿತರು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಸ್ವಾಗತಿಸಿ, ಅಜಿತ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಪಂದ್ಯಾಟದಲ್ಲಿ ಜಿಲ್ಲೆಯ ಬಾಲಕರ 10 ಹಾಗೂ ಬಾಲಕಿಯರ 12 ತಂಡಗಳು ಭಾಗವಹಿಸಿದ್ದವು. ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ ವಂದಿಸಿದರು.

Exit mobile version