ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಆಯೋಜನೆಯಲ್ಲಿ ನಡೆದ ಪ್ರತಿಭಾ ದಿನಾಚರಣೆ 2025 ಉತ್ಸಾಹ ಮತ್ತು ಸೃಜನಶೀಲತೆಯ ಸಡಗರದಿಂದ ಕಂಗೊಳಿಸಿತು.
ಕಾರ್ಯಕ್ರಮವು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಪ್ರಕಾಶ್ ಕ್ರಮಧಾರಿ ಅವರ ಸ್ವಾಗತ ಭಾಷಣದಿಂದ ಆರಂಭಗೊಂಡಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ದುಗ್ಗಪ್ಪ ಕಜೆಕಾರ್, ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ಪಿ. ದಯಾನಂದ ಪೈ, ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸತೀಶ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ತಮ್ಮ ಸೃಜನಾತ್ಮಕ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಅವರು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಉತ್ತಮ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು. ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ. ಡಾ. ಸ್ಟ್ಯಾನಿ ಗೋವಿಯಸ್ ಅವರು ಅಧ್ಯಕ್ಷತೆ ವಹಿಸಿ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತವೆ ಎಂದು ಹೇಳಿದರು.
ಒಂಬತ್ತು ತರಗತಿಗಳ ವಿದ್ಯಾರ್ಥಿಗಳು ಗಾಯನ, ನೃತ್ಯ, ನಾಟಕ ಮತ್ತು ನಿರೂಪಣೆಯಂತಹ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಡಾ. ದುಗ್ಗಪ್ಪ ಕಜೆಕರ್, ಡಾ. ಚಂದ್ರಶೇಖರ ಮಯ್ಯ ಹಾಗೂ ಯನೆಪೋಯ (ಪರಿಗಣಿತ) ವಿಶ್ವವಿದ್ಯಾಲಯ, ಮಂಗಳೂರಿನ ಸಂಶೋಧನಾ ವಿದ್ಯಾರ್ಥಿನಿ ಸಾಯಿರೂಪಾ ಅವರು ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.
ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಚಂದ್ರಶೇಖರ ಮಯ್ಯ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ವಿಜೇತರನ್ನು ಅಭಿನಂದಿಸಿ, ವಿದ್ಯಾರ್ಥಿಗಳನ್ನು ತಮ್ಮ ಪ್ರತಿಭೆಯನ್ನು ಮುಂದುವರೆಸಲು ಪ್ರೋತ್ಸಾಹಿಸಿದರು.
ಚಾಂಪಿಯನ್ ಪ್ರಶಸ್ತಿ ಮೂರನೇ ವರ್ಷದ ಗಣಕಶಾಸ್ತ್ರ ವಿಭಾಗದ (ಬಿ.ಸಿ.ಎ) ವಿದ್ಯಾರ್ಥಿಗಳು ಪಡೆದರೆ, ವಾಣಿಜ್ಯ ಸ್ನಾತಕೋತ್ತರ (ಎಂ.ಕಾಂ) ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದ ಧನ್ಯವಾದವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಗೌಡ ನೆರವೇರಿಸಿದರು.
ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ, ಅಧ್ಯಾಪಕ ವರ್ಗದವರ ಮತ್ತು ವಿದ್ಯಾರ್ಥಿಗಳ ಒಗ್ಗಟ್ಟಿನ ಪ್ರಯತ್ನದಿಂದ ಪ್ರತಿಭಾ ದಿನಾಚರಣೆ 2025 ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಮತ್ತು ಇತಿಹಾಸ ವಿಭಾಗದ ಭಾಗ್ಯಶ್ರೀ ಅವರು ನಿರೂಪಿಸಿದರು.