Site icon Suddi Belthangady

ಉಜಿರೆ: ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ

ಉಜಿರೆ: ಪುದುವೆಟ್ಟು ಎಸ್.ಡಿ.ಎಮ್. ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವನ್ನು ಗ್ರಾ.ಪಂ. ಅಧ್ಯಕ್ಷ ಪೂರ್ಣಾಕ್ಷ ಉದ್ಘಾಟಿಸಿ, ಪುದುವೆಟ್ಟು ಗ್ರಾಮೀಣ ಪ್ರದೇಶದಲ್ಲಿ ಎನ್.ಎಸ್.ಎಸ್. ಕಾರ್ಯಚಟುವಟಿಕೆ ಹಮ್ಮಿಕೊಂಡಿರುವುದು ಸಂತಸವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಎನ್.ಎಸ್.ಎಸ್. ಎಂದರೆ ಕೇವಲ ಶ್ರಮದಾನ ಅಲ್ಲ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಜೀವನ ಮೌಲ್ಯ, ಮತ್ತು ಅವರು ಬದುಕುವ ಕಲೆಯನ್ನು ಶಿಬಿರಗಳ ಮೂಲಕ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುವುದು. ಶ್ರಮದಾನದಲ್ಲಿ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವ, ಸೇವಾ ಮನೋಭಾವವನ್ನು ಮೂಡಿಸಿ ಅವರು ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು ಎಂಬುದೇ ಈ ಶಿಬಿರದ ಉದ್ದೇಶವಾಗಿದೆ ಎಂದರು. ಶ್ರಮದಾನದ ಜೊತೆಗೆ ತಜ್ಞರಿಂದ ಕೃಷಿ ಮಾಹಿತಿ, ಪರಿಸರ ಸಂರಕ್ಷಣೆ, ತಂತ್ರಜ್ಞಾನದ ಮಾಹಿತಿ, ವಿದ್ಯುತ್ ಉಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶವನ್ನು ಕೂಡಾ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ಶ್ರಮದಾನದ ಮೂಲಕ ಈ ಶಾಲೆಯಲ್ಲಿ ಆವರಣದ ಸ್ವಚ್ಚತೆ, ಕೈ ತೋಟ ನಿರ್ಮಾಣ, ನೀರಾವರಿ ಸೌಲಭ್ಯ, ಮುಂತಾದ ಹಲವು ಕೆಲಸಗಳನ್ನು ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ‌ಗೌಡ, ಪುದುವೆಟ್ಟು ಎಸ್.ಡಿ.ಎಮ್ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ, ನಿವೃತ ಮುಖ್ಯ ಶಿಕ್ಷಕ ಶ್ರೀಧರ್ ನಾಯರ್, ಪ್ರಗತಿ ಪರ ಕೃಷಿಕ ಚಿತ್ತರಂಜನ್ ಜೈನ್, ಸಹಕಾರಿ ಹಾಲು ಉತ್ಪಾದಕರ ಸಂಘದ ರಂಗನಾಥ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಶಿಧರ್, ಎ.ಪಿ.ಎಂ.ಸಿ ಮಾಜಿ ಸದಸ್ಯ ಅಬ್ದುಲ್ ಗಪೂರ್, ಮತ್ತಿತರರು ಉಪಸ್ಥಿತರಿದ್ದರು.

ಎನ್.ಎಸ್.ಎಸ್.ಯೋಜನಾಧಿಕಾರಿ ಪ್ರಕಾಶ್ ಗೌಡ ಮತ್ತು ಉಪ ಯೋಜನಾಧಿಕಾರಿಗಳಾದ ಲೋಹಿತ್ ಎಸ್., ಪುಷ್ಪಲತಾ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಮಂಜೂಷ ಸ್ವಾಗತಿಸಿ, ಭವಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಮಾನ್ಯ ವಂದಿಸಿದರು.

Exit mobile version