ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ‘ಹೆಗ್ಗಡೆ’ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ (ಅ.24) ಪ್ರಯುಕ್ತ, ಅವರ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತ ವಿಶೇಷ ಮಾಹಿತಿ ಕಾರ್ಯಕ್ರಮ ಎಸ್.ಡಿ.ಎಂ. ಮಹಿಳಾ ಐಟಿಐ SDM Industrial Training Institute for Women ನಲ್ಲಿ ಅ.13ರಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್.ಕೆ.ಡಿ.ಆರ್.ಡಿ.ಪಿ.) ಯ ಸಾರ್ವಜನಿಕ ಸಂಪರ್ಕಾಧಿಕಾರಿ ದುಗ್ಗಪ್ಪ ಗೌಡ ಅವರು, ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಅಣ್ಣಪ್ಪ ದೈವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ರೀತಿ ಹಾಗೂ ಶ್ರೀ ಮಂಜುನಾಥ ಸ್ವಾಮಿಯನ್ನು ಕದ್ರಿ ಕ್ಷೇತ್ರದಿಂದ ಕರೆದುಕೊಂಡು ಬಂದ ಕಾರಣ ಸಹಿತ ಕ್ಷೇತ್ರದ ಹಿನ್ನೆಲೆ, ಇತಿಹಾಸ ತಿಳಿಸಿದರು. ಧರ್ಮಸ್ಥಳದ ಕಾರ್ಯಕ್ಷೇತ್ರ ಕುರಿತು ಹಾಗೂ ಹೆಗ್ಗಡೆ ಅವರು ಕೈಗೊಂಡ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಕುರಿತು ವಿವರಿಸಿದರು.
ಅಪರಾಹ್ನ ನಡೆದ ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಿವಾಕರ ಕೆ. ಅವರು, ಹೆಗ್ಗಡೆ ಅವರ ಶೈಕ್ಷಣಿಕ ಕಾರ್ಯಕ್ರಮ ಕುರಿತು ಮಾತನಾಡಿದರು. ಶಿಕ್ಷಣಕ್ಕೆ ಕೊಡುಗೆ, ಪ್ರೋತ್ಸಾಹ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆರಂಭ ಹಾಗೂ ಬೆಳೆದು ಬಂದ ರೀತಿ, ಗ್ರಾಮೀಣ ಪ್ರದೇಶದ ಜನರಿಗೆ ಇದರ ಪ್ರಯೋಜನ, ಮೂಲಭೂತ ಸೌಕರ್ಯ, ಗುಣಮಟ್ಟ ಹಾಗೂ ಕಡಿಮೆ ಶುಲ್ಕದೊಂದಿಗೆ ಶಿಕ್ಷಣ ನೀಡುತ್ತಿರುವ ಕಾರಣ, ವಿದ್ಯಾರ್ಥಿವೇತನ ಇತ್ಯಾದಿ ವಿಚಾರ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಿಗೆ ಆಯೋಜಿಸಿದ ‘ಶಿಕ್ಷಣಕ್ಕೆ ಹೆಗ್ಗಡೆ ಅವರು ನೀಡಿರುವ ಕೊಡುಗೆಗಳು (ಪರ); ಶೈಕ್ಷಣಿಕ ಪಕ್ಷಪಾತ ಮತ್ತು ಉಪದೇಶ (ವಿರುದ್ಧ)’ ಚರ್ಚಾಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಅವರು ಭಾಗವಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಮಹಿಳಾ ಐಟಿಐ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಧಕ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.