Site icon Suddi Belthangady

ಮುಂಡಾಜೆ: ಕುಸಿದ ಮೋರಿ-ಗುಂಡ ದೈವಸ್ಥಾನದ ಸಂಪರ್ಕ ಕಡಿತ

ಮುಂಡಾಜೆ: ಗ್ರಾಮದ ಗುಂಡ ಶ್ರೀ ಮೂರ್ತಿಲ್ಲಾಯ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೋರಿ ಕುಸಿದು ಬಿದ್ದು ಸಂಪರ್ಕ ಕಡಿತ ಉಂಟಾಗಿದೆ. ಈ ಹಿಂದೆ ಭಾಗಶಃ ಕುಸಿತ ಕಂಡಿದ್ದ ಮೋರಿ ಅ. 14ರಂದು ಸಂಜೆ ಸುರಿದ ಭಾರಿ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ ದೈವಸ್ಥಾನ ಸಹಿತ ಇಲ್ಲಿನ ನಾಲ್ಕಾರು ಮನೆಗಳಿಗೆ ಸಂಪರ್ಕ ಇಲ್ಲದಂತಾಗಿದೆ. ಸ್ಥಳೀಯರು ಪಕ್ಕದ ತೋಟಗಳಲ್ಲಿ ಸುತ್ತುಬಳಸಿನ ದಾರಿಯಲ್ಲಿ ನಡೆದುಕೊಂಡು ಹೋಗುವಂತಾಗಿದೆ.

ಈ ಮಳೆಗಾಲದಲ್ಲಿ ಈ ಮೋರಿ ಕುಸಿತ ಕಾಣತೊಡಗಿತ್ತು. ಈ ಸಮಯ ಇದರ ದುರಸ್ತಿಗೆ ಮುಂಡಾಜೆ ಗ್ರಾಮ ಪಂಚಾಯಿತಿ ಮುಂದಾಗಿತ್ತು. ಆದರೆ ಈ ಜಾಗ ಖಾಸಗಿ ವ್ಯಕ್ತಿಯೊಬ್ಬರದ್ದಾಗಿರುವ ಕಾರಣ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ. ಆದರೆ ಇದೀಗ ಮೋರಿ ಸಂಪೂರ್ಣ ಕುಸಿದು ಬಿದ್ದಿದ್ದು ಸದ್ಯ ತಾತ್ಕಾಲಿಕ ಸಂಪರ್ಕವೂ ಇಲ್ಲದಂತಾಗಿದೆ. ಇಲ್ಲಿ ಮೋರಿ ನಿರ್ಮಾಣಕ್ಕೆ ಖಾಸಗಿಯವರ ಆಕ್ಷೇಪ ಇರುವ ಕಾರಣ ಸಂಪರ್ಕಕ್ಕೆ ಮುಂದಿನ ಯೋಜನೆ ಏನು ಎಂಬುದು ಕಾದು ನೋಡಬೇಕಾಗಿದೆ. ಸ್ಥಳಕ್ಕೆ ಪಂಚಾಯಿತಿ ಆಡಳಿತ ಮಂಡಳಿ ತೆರಳಿ ಪರಿಶೀಲನೆ ನಡೆಸಿದ್ದು ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಕೊಡುವ ಭರವಸೆ ನೀಡಿದೆ.

Exit mobile version