ಬೆಳ್ತಂಗಡಿ: ಮಾನವ ಹಕ್ಕುಗಳು ಅಧಿಕಾರಿ ಎಂದು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಅವರಿಂದ ಮಾಧ್ಯಮಗಳಿಗೆ ಪರಿಚಯಿಸಲ್ಪಟ್ಟಿದ್ದ ಮದನ್ ಬುಗುಡಿ ಎಂಬವರು ಅ.14ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ದೂರು ದಾಖಲಾಗಿತ್ತು: ದಿನಾಂಕ 30.08.2025ರಂದು ಬೆಳ್ತಂಗಡಿಗೆ ಬಂದಿದ್ದ ಸಮಯ ತನ್ನ ಮೊಬೈಲ್ ಫೋನ್‌ನಲ್ಲಿ ಯೂ ಟ್ಯೂಬ್ ವೀಕ್ಷಿಸುತ್ತಿದ್ದಾಗ ಗಿರೀಶ್ ಮಟ್ಟಣ್ಣನವರ್‌ರವರು ಮದನ್ ಬುಗುಡಿರವರ ಜೊತೆ ನಿಂತುಕೊಂಡು ಮಾಧ್ಯಮದ ಮುಂದೆ ಮಾತನಾಡುತ್ತಾ ಸಮಾಜದ ಶಾಂತಿ, ಸೌಹಾರ್ದತೆಯನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಾರ್ವಜನಿಕರು ದಂಗೆ ಏಳುವ ಸಲುವಾಗಿ ಮತ್ತು ಧರ್ಮಸ್ಥಳದ ಬಗ್ಗೆ ಧಾರ್ಮಿಕ ಭಾವನೆಯನ್ನು ಕೆಡಿಸುವ ಉದ್ದೇಶದಿಂದ ಮತ್ತು ಸಾರ್ವಜನಿಕರನ್ನು ಮೋಸಪಡಿಸುವ ಉದ್ದೇಶದಿಂದ ಮದನ್ ಬುಗುಡಿ ಎಂಬವರನ್ನು ಮಾನವ ಹಕ್ಕು ಆಯೋಗದ ಅಧಿಕಾರಿಯೆಂದು ಸುಳ್ಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಸಮಾಜವನ್ನು ವಂಚಿಸಿ ಮಾನವ ಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕವನ್ನು ತರಲು ಅವರು ಯತ್ನಿಸಿದ್ದಾರೆ.
ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿಯ ಪ್ರವೀಣ ಕೆ.ಆರ್.(32ವ)ರವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 100/2025ರಂತೆ ಕಲಂ 204,319(2), 353(2) ಜೊತೆಗೆ 3(5)ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಬಗ್ಗೆ ಪೊಲೀಸರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ನೀಡಿದ್ದರು. ನಂತರ ತನಿಖೆಗೆ ಹಾಜರಾಗುವಂತೆ ಮದನ್ ಬುಗುಡಿಗೆ ನೊಟೀಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮದನ್ ಬುಗುಡಿ ವಿಚಾರಣೆಗೆ ಹಾಜರಾಗಿದ್ದರು. ಮದನ್ ಬುಗುಡಿ ಅವರು ಹುಬ್ಬಳ್ಳಿಯಲ್ಲಿ ಓರ್ವ ರೌಡಿಶೀಟರ್ ಆಗಿದ್ದರೂ ಅದನ್ನು ಮರೆ ಮಾಚಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸುವಾಗ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ತಿಳಿಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮದನ್ ಅವರು ತನ್ನನ್ನು ಆ ರೀತಿ ಯಾಕಾಗಿ ಹೇಳಿದ್ದರು ಎಂದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.