ಬೆಳ್ತಂಗಡಿ: ವನ್ಯಜೀವಿ ವಲಯ 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಜಮಲಾಬಾದ್ ಕೋಟೆಯ ಪರಿಸರದಲ್ಲಿ ಪಕ್ಷಿ ವೀಕ್ಷಣೆ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೆಳ್ತಂಗಡಿ ರೇಂಜ್ ಫಾರೆಸ್ಟ್ ಆಫೀಸರ್ ಶರ್ಮಿಷ್ಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಬದುಕು ಅಳಿವು ಮತ್ತು ಜೀವನಚಕ್ರದ ಬಗ್ಗೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಉಪ ಅರಣ್ಯ ಅಧಿಕಾರಿ ಮ್ಯಾಥ್ಯೂ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯ ಮಹತ್ವವನ್ನ ವಿವರಿಸಿದರು.
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಬಿ.ಎ. ಶಮಿವುಲ್ಲಾ ಕಾರ್ಯಕ್ರಮದ ಸಂಪೂರ್ಣ ರೂಪರೇಶಿಯನ್ನ ವಿದ್ಯಾರ್ಥಿಗಳಿಗೆ ವಿವರಿಸಿ, ಕಾರ್ಯಕ್ರಮ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು. ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆಯನ್ನು ಮಾಡಿ ವನ್ಯಪ್ರಾಣಿಗಳ ಬಗ್ಗೆ ತಮಗಿರುವ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಂಡರು.
ವಿದ್ಯಾರ್ಥಿಗಳು ಜಮಲಾಬಾದ್ ಪರಿಸರದ ಸುತ್ತಮುತ್ತ ಬಿದ್ದಿರುವ ಕಸ ಕಡ್ಡಿ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.ಉಪವಲಯ ಅರಣ್ಯ ಅಧಿಕಾರಿ ರವೀಂದ್ರ ಸ್ವಾಗತಿಸಿದರು. ರಾ.ಸೇವಾ ಯೋಜನ ಘಟಕದ ನಾಯಕ ಆಶಿಕ್ ದ್ವಿತೀಯ ಬಿ.ಕಾಂ. ಧನ್ಯವಾದ ನೀಡಿದರು.