ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಪರಂಪರೆ ಮತ್ತು ಮೌಲ್ಯಗಳಿಂದ ಪ್ರೇರಣೆ ಪಡೆದು ಸಮೃದ್ಧ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಕೆ. ನುಡಿದರು. ಅವರು ಆಳ್ವಾಸ್ ಫಿಜಿಯೋಥೆರಪಿ, ನರ್ಸಿಂಗ್, ನರ್ಸಿಂಗ್ ಸೈನ್ಸಸ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಪ್ರಗತಿಗಾಗಿ ಹೊರ ಜಗತ್ತಿಗೆ ತೆರಳಬಹುದು. ಹೊಸ ಜ್ಞಾನ, ಕೌಶಲ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಅನುಭವಗಳನ್ನು ಪಡೆಯಬಹುದು. ಆದರೆ ಈ ಮೂಲಕ ನಮ್ಮ ಮೂಲ ಪರಂಪರೆ ಮತ್ತು ಮೌಲ್ಯಗಳನ್ನು ಮರೆಯಬಾರದು. ಜಾಗತಿಕ ಶೈಕ್ಷಣಿಕ ಕೇಂದ್ರಗಳ ಸಹಕಾರದ ಮೂಲಕ ನಮ್ಮ ಪ್ಯಾರಾಮೆಡಿಕಲ್ ಕೋರ್ಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳಸಬೇಕಿದೆ ಎಂದರು.
ರಾಜೀವ್‌ಗಾಂದಿ ವಿಜ್ಞಾನ ವಿವಿಗಳ ಸೆನೆಟ್ ಸದಸ್ಯೆ ವೈಶಾಲಿ ಶ್ರೀಜಿತ್ ಮಾತನಾಡಿ, ಇಂದಿನ ಯುವ ಜನರು ಹೆಚ್ಚಾಗಿ ಆರೋಗ್ಯಕ್ಕೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ತಳಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ತುರ್ತು ಅವಶ್ಯಕತೆ ಇದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ಜೀವನದಲ್ಲಿ ಮುನ್ನಡೆಯಲು ಮಹತ್ವಾಕಾಂಕ್ಷೆ, ಶಿಸ್ತು ಮತ್ತು ಸ್ಥೈರ್ಯ ಸಹಕಾರಿ, ಮಹತ್ವಾಕಾಂಕ್ಷೆ, ಗುರಿಯತ್ತಾ ಪ್ರೇರೇಪಿಸಿದರೆ, ಶಿಸ್ತು ಗಮನವನ್ನೂ ಕೇಂದ್ರೀಕರಿಸಲು ಸಹಕಾರಿ, ಮತ್ತು ಸ್ಥೈರ್ಯ ಸವಾಲುಗಳನ್ನು ಗೆಲ್ಲಲು ಶಕ್ತಿಯನ್ನು ಒದಗಿಸುತ್ತದೆ ಎಂದರು.
ಕಾಲೇಜು ವಾರ್ಷಿಕ ಬಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕçತಿಕ ಕರ‍್ಯಕ್ರಮಗಳು ನಡೆದವು. ಕಾರ‍್ಯಕ್ರಮದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿ, ಪ್ರಾಚರ‍್ಯರಾದ ಡಾ ಶಂಕರ ಶೆಟ್ಟಿ, ಡಾ ಕ್ಷಮಾ ಶೆಟ್ಟಿ, ಪ್ರೋ ಶೈಲಾ, ಪ್ರೋ ಆದರ್ಶ ಹೆಗ್ಡೆ, ಪ್ರೋ ರೇಣುಕಾ, ಆಡಳಿತಾಧಿಕಾರಿ ಹೇಮಂತ್ ಕೆ, ಇದ್ದರು. ಡಾ ಶಂಕರ ಶೆಟ್ಟಿ ಸ್ವಾಗತಿಸಿ, ಡಾ. ಸೌಧ ನಿರೂಪಿಸಿದರು. ಡಾ. ಕ್ಷಮಾ ಶೆಟ್ಟಿ ವಂದಿಸಿದರು.