ಮುಂಡಾಜೆ: ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಂಗಳೂರು ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ 14ರ ಮತ್ತು 17ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ
ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಮುಂಡಾಜೆಯ ವಿವೇಕಾನಂದ ಕ್ರೀಡಾಂಗಣದಲ್ಲಿ ಅ. 10ರಂದು ಜರುಗಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ದೀಪ ಪ್ರಜ್ವಲನೆಯ ಮೂಲಕ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ, ಮುಂಡಾಜೆ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗಳನ್ನು ಪ್ರಶಂಸಿಸಿ, ಕ್ರೀಡೆಯಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬೆಳ್ತಂಗಡಿಯ ನಿಕಟಪೂರ್ವ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಪಂದ್ಯಾಟಕ್ಕೆ ಶುಭಹಾರೈಸಿದರು. ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್ ಎಂ., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯರಾಜ್ ಜೈನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವಿರಾಜ್ ಗೌಡ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ರಮೇಶ್, ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯಚಂದ್ರ, ಕಾರ್ಯದರ್ಶಿ ನಾರಾಯಣ ಗೌಡ ಕೊಳಂಬೆ, ಕೋಶಾಧಿಕಾರಿ ಡಾ. ರವಿ ಎಂ.ಎನ್., ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಟಿ., ದೈಹಿಕ ಶಿಕ್ಷಣ ಶಿಕ್ಷಕ ಗುಣಪಾಲ್ ಎಂ.ಎಸ್., ಪ. ಪೂ. ಕಾಲೇಜಿನ ಪ್ರಾಂಶುಪಾಲೆ ಗೀತಾ, ಸರಸ್ವತಿ ಆಂ. ಮಾ. ಶಾಲೆ ಮುಂಡಾಜೆಯ ಮುಖ್ಯ ಶಿಕ್ಷಕಿ ಚಂದ್ರಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾ ವಿಭಾಗ, ಪ. ಪೂ. ಕಾಲೇಜಿನ ಎನ್.ಎಸ್.ಎಸ್, ರೋವರ್ಸ್ ಮತ್ತು ರೇಂಜರ್ಸ್ ವಿಭಾಗಗಳ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು. ಕ್ರೀಡಾಪಟುಗಳನ್ನು ಸೋಮಂತಡ್ಕ- ಮುಂಡಾಜೆ ಪೇಟೆಯಿಂದ ಗೌರವಪೂರ್ವಕವಾಗಿ ವಾದ್ಯ ಘೋಷಗಳೊಂದಿಗೆ ಸಂಭ್ರಮದಿಂದ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ವಾಲಿಬಾಲ್ ಆಟಗಾರ್ತಿ ಯಕ್ಷಿತಾ ಅವರು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಪ. ಪೂ. ಕಾಲೇಜಿನ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿದರು. ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿ, ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ರಾವ್ ಧನ್ಯವಾದಗೈದರು.