ಬೆಳ್ತಂಗಡಿ: ರಾಷ್ಟ್ರೀಯ ಗೋಕುಲ್ ಮೀಷನ್ ಯೋಜನೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ತಣ್ಣೀರುಪಂತ, ಬಂದಾರು, ಪದ್ಮುಂಜ, ಬನ್ನಂಗಳ, ಪಿಲಿಗೂಡು ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರಾಸುಗಳಲ್ಲಿ ಭ್ರೂಣ ವರ್ಗಾವಣೆ ಕಾರ್ಯಕ್ರಮ ತಣ್ಣೀರುಪಂತ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಅ.11 ರಂದು ನಡೆಯಿತು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ ಉತ್ಕೃಷ್ಠ ತಳಿಯ, ಅತ್ಯಧಿಕ ಹಾಲು ನೀಡುವ ರಾಸುಗಳ ಅಂಡಾಣುಗಳನ್ನು ಸಂಗ್ರಹಿಸಿ, ಉತ್ಕೃಷ್ಠ ತಳಿಯ ಹೋರಿಯ ಲಿಂಗ ವರ್ಗೀಕೃತ ವೀರ್ಯಾಣುವಿನೊಂದಿಗೆ ಪ್ರಯೋಗ ಶಾಲೆಯಲ್ಲಿ ಫಲೀಕರಿಸಿ ತಯಾರಾಗುವ ಭ್ರೂಣವನ್ನು ಆರೋಗ್ಯವಂತ ಬದಲಿ ತಾಯಿ ದನದ ಗರ್ಭಕೋಶಕ್ಕೆ ವರ್ಗಾಯಿಸುವ ಪ್ರಕ್ರಿಯೆಯನ್ನು ಭ್ರೂಣ ವರ್ಗಾವಣೆ ಎನ್ನುತ್ತಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಕುಲ್ ಯೋಜನೆಯಡಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಈಗಾಗಲೇ ದೇಶಾದ್ಯಂತ ರಾಸುಗಳಲ್ಲಿ ಭ್ರೂಣ ವರ್ಗಾವಣೆ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ನಂದಿನಿ ವೀರ್ಯಾಣು ಕೇಂದ್ರದ ಬುಲ್ ಮದರ್ ಫಾರ್ಮ್ ನಲ್ಲಿ ಈ ಕಾರ್ಯಕ್ರಮ ಯಶಸ್ಸನ್ನು ಕಂಡಿದ್ದು, ಶೇ.30 ರಾಸುಗಳ ಗರ್ಭಧರಿಸಿ ಕೆಲವು ಕರುಗಳ ಜನನವು ಆಗಿರುತ್ತದೆ. ಕೋಲಾರ, ಬೆಂಗಳೂರು, ಮಂಡ್ಯ, ಚಾಮರಾಜನಗರ ಹಾಲು ಒಕ್ಕೂಟಗಳಲ್ಲಿ ಈ ಯೋಜನೆಯ ವಿವಿಧ ಹಂತಗಳಲ್ಲಿ ಅನುಷ್ಠಾನಗೊಂಡಿರುತ್ತದೆ. ಒಟ್ಟು 350 ಕ್ಕೂ ಅಧಿಕ ಭ್ರೂಣ ವರ್ಗಾವಣೆಗಳನ್ನು ನಡೆಸಲಾಗಿದ್ದು, ಇದೀಗ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಮೊದಲು ಬಾರಿಗೆ ತಣ್ಣೀರುಪಂತ, ಬನ್ನಂಗಳ, ಪದ್ಮುಂಜ, ಬಂದಾರು, ಪಿಲಿಗೂಡು ಹಾಲು ಉ.ಸ.ಸಂಘಗಳ ವ್ಯಾಪ್ತಿಯ ಸುಮಾರು 20 ದನಗಳ ಭ್ರೂಣ ವರ್ಗಾವಣೆಗಳನ್ನು ನಡೆಸಲಾಗುತ್ತಿದೆ.
ಭ್ರೂಣ ವರ್ಗಾವಣೆಯ ವೆಚ್ಚ 21,000 ಆಗುವುದು ಅದರಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ ಅನುದಾನದಲ್ಲಿ ಐದು ಸಾವಿರ, ಕರ್ನಾಟಕ ಹಾಲು ಉತ್ಪಾದಕರ ಮಂಡಳಿಯಿಂದ ಹತ್ತು ಸಾವಿರ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ವತಿಯಿಂದ ಐದು ಸಾವಿರ ಅನುದಾನ ರೈತರಿಗೆ ಸಿಗುತ್ತಾದೆ.ಭ್ರೂಣ ವರ್ಗಾವಣೆಯ ಮುಖಾಂತರ ರಾಸುಗಳ ಗರ್ಭಧರಿಸಿರುವುದು. ದೃಢಪಡಿಸಿದ ನಂತರವಷ್ಟೇ ಮೊತ್ತವನ್ನು ಸಂಗ್ರಹಿಸಿ ಸೇವಾದಾರರಿಗೆ ಶುಲ್ಕ ಪಾವತಿಸಲಾಗುವುದು ಸೇವಾದಾರರಾಗಿ ರಾಹುರಿ ಸ್ಪರ್ಮ್ ಸ್ಟೇಷನ್ ಮಹಾರಾಷ್ಟ್ರ ಇವರು ನಿಯೋಜಿತರಾಗಿರುತ್ತಾರೆ.ಅಧಿಕ ಹಾಲಿನ ಇಳುವರಿಯ ಉತ್ಕೃಷ್ಟ ಹೆಣ್ಣು ಕರುಗಳನ್ನು ಪಡೆಯಲು ಭ್ರೂಣ ವರ್ಗಾವಣೆಯು ಸಹಕಾರಿಯಾಗಿದ್ದು, ವಿವಿಧ ಅನುದಾನಗಳು ಲಭ್ಯವಿರುವುದರಿಂದ ಇದು ರೈತರಿಗೆ ಕಡಿಮೆ ದರದಲ್ಲಿ ಲಭಿಸುತ್ತದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್, ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್ ರಾವ್, ಭರತ್ ಎನ್., ಪ್ರಭಾಕರ್ ಆರಂಬೋಡಿ, ನಿರ್ದೇಶಕಿ ಸವಿತಾ ಎನ್., ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ರವಿರಾಜ್ ಉಡುಪ, ತಣ್ಣೀರುಪಂತ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಜಯರಾಜ್, ಬೆಳ್ತಂಗಡಿ ಪಶು ಅಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.