ನೆರಿಯ: ಕಡ್ಡಿ ಬಾಗಿಲು ನಿವಾಸಿ ಹರೀಶ್ ವಿ. ನೆರಿಯ ಅವರ ಮನೆಯಲ್ಲಿ ಅ.6ರಂದು ಆಕಸ್ಮಿಕವಾಗಿ ರಾತ್ರಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಮನೆ ಹಾನಿಯಾಗಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ.
ಹರೀಶ್ ಅವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಮುಂಬೈ ಹೋಗಿದ್ದು ಅಲ್ಲಿ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದರು. ಪತ್ನಿ ಹಾಗೂ ಮಗಳು ತವರು ಮನೆಗೆ ಹೋಗಿದ್ದರು. ಇನ್ನಿಬ್ಬರು ಮಕ್ಕಳು ಹಾಗೂ ತಾಯಿ ಪಕ್ಕದ ಮನೆಯಲ್ಲಿ ಇದ್ದರು.
ಸಂಜೆ ವೇಳೆ ಮಕ್ಕಳು ಮನೆಗೆ ತೆರಳಿ ವಾಪಸ್ ಬಂದಿದ್ದರು. ಬಳಿಕ ಬೆಂಕಿ ಅನಾಹುತ ಉಂಟಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮನೆಗೆ ಬೆಂಕಿ ಹೇಗೆ ತಗುಲಿದೆ ಎಂಬುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಹಂಚಿನ ಮೇಲ್ಛಾವಣಿಯ ಮನೆ ಬಹುತೇಕ ಬೆಂಕಿಗೆ ಆಹುತಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತ್ ನ ನೀರಿನ ಮೂಲಕ ಬೆಂಕಿ ನಂದಿಸಲಾಯಿತು.