ಮನೆಯಲ್ಲಿ ಅಕ್ರಮವಾಗಿ ಎರಡು ತಲವಾರು ಮತ್ತು ಒಂದು ಬಂದೂಕು ದಾಸ್ತಾನು ಮಾಡಿಟ್ಟಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ತಲೆ ಮರೆಸಿಕೊಂಡಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸೆ.೩೦ರಂದು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲ ದಿನೇಶ್ ಹೆಗ್ಡೆ ಉಳೇಪ್ಪಾಡಿ ವಾದ ಮಂಡಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವಾಗ ಸರಿಯಾದ ಮಾನದಂಡ ಅನುಸರಿಸಿಲ್ಲ. ತಲವಾರು ಇತ್ತು ಎಂದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಅದು ಎಷ್ಟು ಉದ್ದ ಇತ್ತು, ಎಷ್ಟು ಅಗಲ ಇತ್ತು ಎಂದು ಕೇಸ್‌ನ ವಿವರದಲ್ಲಿ ನಮೂದಿಸಿಲ್ಲ. ಅದು ಚೂರಿಯೂ ಆಗಿರಬಹುದು ಎಂದು ನ್ಯಾಯಾಧೀಶರ ಗಮನ ಸೆಳೆದ ದಿನೇಶ್ ಹೆಗ್ಡೆ ಉಳೇಪ್ಪಾಡಿ ಅವರು ಪೊಲೀಸರು ವಶಕ್ಕೆ ಪಡೆದುಕೊಂಡಿzವೆ ಎಂದು ಹೇಳುತ್ತಿರುವ ಬಂದೂಕು ಮಣ್ಣು ಹಿಡಿದಿತ್ತು. ಹಿಂದೆ ಇಂತಹ ಬಂದೂಕು ಇಟ್ಟುಕೊಳ್ಳಲು ಅನುಮತಿ ಇತ್ತು. ಆ ನಂತರ ಕಾನೂನು ತಿದ್ದುಪಡಿ ಆಗಿದೆ.
ಅದಲ್ಲದೆ ಮಹೇಶ್ ಶೆಟ್ಟಿ ಅವರ ಮನೆಗೆ ಪೊಲೀಸರು ಯಾವಾಗಲೂ ಬರುತ್ತಾರೆ. ಹೋಗುತ್ತಾರೆ. ಅಂತಹ ಸ್ಥಳದಲ್ಲಿ ಶಸ್ತ್ರಾಸ್ತ್ರ ಅಕ್ರಮವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕೇಸು ದಾಖಲಿಸಬೇಕು ಎಂಬ ಕಾರಣಕ್ಕಾಗಿ ಕೇಸು ದಾಖಲಿಸಲಾಗಿದೆಯೇ ಹೊರತು ಅದರಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಹೇಳಿದರು. ಬಳಿಕ ಸರಕಾರಿ ವಕೀಲೆ ಜುಡಿತ್ ಕ್ರಾಸ್ತಾ ಅವರು ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದರು. ಅಕ್ಟೋಬರ್ ೪ರಂದು ಆಕ್ಷೇಪಣೆಗೆ ದಿನ ನಿಗದಿ ಪಡಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.
ಮಹೇಶ್ ಶೆಟ್ಟಿ ಪರ ವಕೀಲರ ವಾದ ಈಗಾಗಲೇ ಮುಕ್ತಾಯಗೊಂಡಿದ್ದು ಸರಕಾರಿ ವಕೀಲರ ಆಕ್ಷೇಪಣೆ ಆಲಿಸಿದ ಬಳಿಕ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಬೇಕೇ ಪುರಸ್ಕರಿಸಬೇಕೇ ಎಂದು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ.