Site icon Suddi Belthangady

ಜನಪರ ಮನೋಭಾವ ಹಾಗೂ ಪ್ರಾಮಾಣಿಕತೆ ಸೇವೆಗೆ ನೂತನ ಭಾಷ್ಯ ಬರೆದಿದೆ- ಉಜಿರೆ ಗ್ರಾಮ ಪಂಚಾಯತ್ ನಮ್ಮ ಹೆಮ್ಮೆ: ಡಾ.ಗೋಪಾಲಕೃಷ್ಣ

ಉಜಿರೆ: ಸಾಮಾನ್ಯವಾಗಿ ಗ್ರಾಮ ಪಂಚಾಯತಿ ಎಂದರೆ ಕಚೇರಿಯ ನಾಲ್ಕು ಗೋಡೆಗಳೊಳಗಿನ ಕೆಲಸ ಎಂದು ಜನ ಸಾಮಾನ್ಯರು ಭಾವಿಸುತ್ತಾರೆ. ಆದರೆ ಉಜಿರೆ ಗ್ರಾಮ ಪಂಚಾಯತ್ ಇದಕ್ಕೊಂದು ಅಪವಾದ. ಅದರ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿಗಳು ತೋರಿಸಿದ ಕಾರ್ಯಶೈಲಿ, ಜನಪರ ಮನೋಭಾವ ಹಾಗೂ ಪ್ರಾಮಾಣಿಕತೆ ಸೇವೆಗೆ ನೂತನ ಭಾಷ್ಯ ಬರೆದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ಪಾಲ್ಗೊಂಡಿರುವುದು ನಮಗೆಲ್ಲಾ ಹೆಮ್ಮೆ ತಂದುಕೊಟ್ಟಿದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಶ್ಲಾಘಿಸಿದರು.

ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ದೇಶದ ಗಮನಸೆಳೆದಿರುವ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಿಡಿಒ ಹಾಗೂ ಸಿಬ್ಬಂಧಿಯವರನ್ನು ಬೆನಕ ಆಸ್ಪತ್ರೆಯ ವತಿಯಿಂದ ಗಾಂಧೀ ಜಯಂತಿಯ ಶುಭವಸರದಲ್ಲಿ ಅಭಿನಂದಿಸಿ ಮಾತನಾಡುತ್ತಿದ್ದರು.

ಸರ್ಕಾರದ ಹತ್ತು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದರ ಪರಿಣಾಮವಾಗಿ ಉಜಿರೆ ಗ್ರಾಮ ಪಂಚಾಯತ್ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಮತ್ತು ರಾಜ್ಯದಲ್ಲಿಯೇ ನಂಬರ್ ವನ್ ಗ್ರಾಮ ಪಂಚಾಯತ್ ಆಗಿ ಗುರುತಿಸಿಕೊಂಡಿದೆ. ಮಹಿಳಾ ಸಬಲೀಕರಣ, ಯಶಸ್ವಿ ತ್ಯಾಜ್ಯ ನಿರ್ವಹಣೆ, ಡಿಜಿಟಲ್ ಗ್ರಂಥಾಲಯ, ಮಹಿಳೆಯರಿಗಾಗಿ ಪ್ರತ್ಯೇಕ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳಿಂದಾಗಿ ಜನಮನ್ನಣೆ ಪಡೆದಿದೆ ಎಂದು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಅವರು ತಿಳಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪಿ.ಎಚ್.ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ, ನಮ್ಮ ಭಾರತವು ಬಹುಸಂಸ್ಕೃತಿಗಳ, ವಿವಿಧ ಜಾತಿ-ಭಾಷೆಗಳ ನಾಡು. ಪ್ರತಿಯೊಂದು ಊರಿಗೆ ತನ್ನದೇ ಆದ ವಿಶೇಷತೆ ಇದ್ದಂತೆ, ತನ್ನದೇ ಆದ ಸಮಸ್ಯೆಗಳೂ ಇವೆ. ಹಳ್ಳಿಯ ಸಮಸ್ಯೆ ಮತ್ತು ನಗರದ ಸಮಸ್ಯೆ ಒಂದೇ ಆಗುವುದಿಲ್ಲ. ಇದಕ್ಕಾಗಿಯೇ ನಾವು ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳನ್ನು ಹುಡುಕಬೇಕು. ಆದರೆ ಅವುಗಳು ರಾಷ್ಟ್ರೀಯ ನೀತಿ ಹಾಗೂ ಚೌಕಟ್ಟಿನೊಳಗೆ ಹೊಂದಿಕೊಂಡಾಗ ಮಾತ್ರ ಶಾಶ್ವತವಾದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪಂಚಾಯತ್ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಜನಪರ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಉಪಾಧ್ಯಕ್ಷ ರವಿಕುಮಾರ್ ಬರಮೇಲುರವರು ಸಮಯೋಚಿತವಾಗಿ ಮಾತನಾಡುತ್ತಾ ಬೆನಕ ಆಸ್ಪತ್ರೆಯ ಸೇವೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಡಾ. ಭಾರತಿ ಜಿ.ಕೆ. ಧನ್ಯವಾದ ಅರ್ಪಿಸಿದರು. ಜನರಲ್ ಮ್ಯಾನೇಜರ್ ದೇವಸ್ಯ ವರ್ಗೀಸ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಅಂಕಿತಾ ಜಿ. ಭಟ್, ಡಾ. ರೋಹಿತ್, ಡಾ. ನವ್ಯ ಹಾಗೂ ಬೆನಕ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version