Site icon Suddi Belthangady

ತಿಮರೋಡಿ ಗಡಿಪಾರಿಗೆ ಮಧ್ಯಂತರ ತಡೆ

ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಸ್ಥಾಪಕರಾದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಸೆ.೧೮ರಂದು ಮಾಡಿರುವ ಆದೇಶಕ್ಕೆ ಹೈಕೋರ್ಟ್ ಸೆ.೩೦ರಂದು ಮಧ್ಯಂತರ ತಡೆ ನೀಡಿದೆ. ಬಂಟ್ವಾಳ ಡಿವೈಎಸ್‌ಪಿಯವರ ಕೋರಿಕೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷ ಕಾಲ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ದಂಡಾಧಿಕಾರಿಯೂ ಆಗಿರುವ ಸ್ಟೆಲ್ಲಾ ವರ್ಗೀಸ್ ಅವರು ಮಾಡಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಗಡೀಪಾರು ಆದೇಶಕ್ಕೆ ತಡೆ ನೀಡಬೇಕು ಎಂದು ತಿಮರೋಡಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅಕ್ಟೋಬರ್ ೮ರವರೆಗೆ ಗಡಿಪಾರು ಆದೇಶ ಜಾರಿಗೊಳಿಸದಂತೆ ಮಧ್ಯಂತರ ತಡೆ ನೀಡಿ ಆದೇಶ ನೀಡಿದ್ದು ವಿಚಾರಣೆಯನ್ನು ಮುಂದೂಡಿದ್ದಾರೆ. ರಾಜ್ಯ ಸರಕಾರ, ಪುತ್ತೂರು ಎ.ಸಿ, ಬಂಟ್ವಾಳ ಡಿವೈಎಸ್ಪಿ ಮತ್ತು ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಯಾಗಿಸಲಾಗಿತ್ತು.

ರಾಜಕೀಯ ಕಾರಣಗಳಿದೆ-ವಕೀಲರ ವಾದ: ಮಹೇಶ್ ಶೆಟ್ಟಿ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲರಾದ ತಾರನಾಥ ಪೂಜಾರಿ ಮೂಡಬಿದ್ರೆ, ಎಂ.ಆರ್.ಬಾಲಕೃಷ್ಣ ಸುಳ್ಯ ಮತ್ತು ಮೋಹಿತ್ ಕುಮಾರ್ ಪುತ್ತೂರು ಅವರು ಗಡೀಪಾರು ಆದೇಶದ ಹಿಂದೆ ರಾಜಕೀಯ ಕಾರಣಗಳಿದೆ. ದುರುzಶದಿಂದ ಕೂಡಿದ ಆದೇಶ ಇದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ೩೬ ಮಂದಿಯನ್ನು ಗಡೀಪಾರು ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಿಸಿತ್ತು.

ಆದರೆ ಉಳಿದ ಯಾರನ್ನೂ ಈ ಪ್ರಕ್ರಿಯೆಗೆ ಒಳಪಡಿಸದೆ ಮಹೇಶ್ ಶೆಟ್ಟಿ ಅವರನ್ನು ತರಾತುರಿಯಿಂದ ಗಡೀಪಾರು ಮಾಡಲು ಆದೇಶ ಮಾಡಲಾಗಿದೆ. ಅಲ್ಲದೆ ಕೋಮು ಗಲಭೆಗೆ ಕಾರಣಕರ್ತರಾದವರನ್ನು ಜಿಲ್ಲೆಯಿಂದ ಗಡೀಪಾರು ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಮಹೇಶ್ ಶೆಟ್ಟಿ ವಿರುದ್ಧ ಪ್ರಸ್ತುತ ಯಾವುದೇ ಕೋಮುಗಲಭೆಯ ಕೇಸುಗಳಿಲ್ಲ. ಇದ್ದ ಕೇಸುಗಳಲ್ಲಿ ಅವರು ಈಗಾಗಲೇ ದೋಷಮುಕ್ತಗೊಂಡಿದ್ದಾರೆ. ಇರುವ ಕೇಸ್‌ಗಳಲ್ಲಿ ಅವರು ಜಾಮೀನು ಪಡೆದುಕೊಂಡಿದ್ದಾರೆ.

ಕಾನೂನು ಬಾಹಿರವಾಗಿ ಗಡೀಪಾರು ಆದೇಶ ಹೊರಡಿಸಲಾಗಿದೆ. ಆದ್ದರಿಂದ ಗಡೀಪಾರು ಆದೇಶಕ್ಕೆ ತಡೆ ನೀಡಬೇಕು ಎಂದು ನ್ಯಾಯಪೀಠದ ಗಮನ ಸೆಳೆದರು. ವಕೀಲರ ವಾದ ಪುರಸ್ಕರಿಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರು ಸರಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಅ.೮ರವರೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದ್ದಾರೆ.

Exit mobile version