Site icon Suddi Belthangady

ಸುಪ್ರೀಂಕೋರ್ಟ್‌ನಲ್ಲಿ ವಜಾ ರಹಸ್ಯವಾಗಿಟ್ಟದ್ದು ಏಕೆ?

ಬೆಳ್ತಂಗಡಿ: ಧರ್ಮಸ್ಥಳ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕನಾಗಿದ್ದ ಸಿ.ಎನ್. ಚಿನ್ನಯ್ಯ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ೨೦೨೫ರ ಮೇ ತಿಂಗಳಲ್ಲಿ ಹಿನ್ನಡೆ ಅನುಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದ್ದು, ಇಂಥದ್ದೊಂದು ಮಹತ್ವದ ವಿಚಾರ ರಹಸ್ಯವಾಗಿ ಉಳಿದದ್ದು ಹೇಗೆ ಮತ್ತು ಚಿನ್ನಯ್ಯ ಪರ ವಕೀಲರು ಈ ವಿಷಯವನ್ನು ಬೆಳ್ತಂಗಡಿ ಕೋರ್ಟ್‌ಗೆ ತಿಳಿಸದೆ ಸುಮ್ಮನೆ ಇದ್ದದ್ದು ಏಕೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಕಳೆದೆರಡೂವರೆ ತಿಂಗಳಲ್ಲಿ ಬುರುಡೆ ಕೇಸು ದೇಶದಲ್ಲಿ ಸಂಚಲನ ಸೃಷ್ಟಿಸಿದರೂ, ಸುಪ್ರೀಂಕೋರ್ಟ್‌ನಲ್ಲಾದ ಮಹತ್ವದ ಬೆಳವಣಿಗೆಯನ್ನು ೪ ತಿಂಗಳ ಕಾಲ ಮುಚ್ಚಿಟ್ಟಿzಕೆ ಎನ್ನುವುದು ದಿಗ್ಭ್ರಮೆ ಮೂಡಿಸಿದೆ.

ಚಿನ್ನಯ್ಯನ ದೂರನ್ನು ಆಧರಿಸಿ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚನೆ ಮಾಡಿ, ನಂತರ ನೇತ್ರಾವತಿ ನದಿ ಸುತ್ತಮುತ್ತ ೧೭ ಕಡೆ ಭೂಮಿ ಅಗೆಯುವ ಕಾರ್ಯಾಚರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಎರಡು ಕಡೆ ಎಲುಬುಗಳು ಸಿಕ್ಕಿದ್ದು ಬಿಟ್ಟರೆ, ಮಹತ್ವದ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ನಂತರ, ಇಡೀ ಪ್ರಕರಣದಲ್ಲಿ ಎಸ್‌ಐಟಿಗೆ ಷಡ್ಯಂತ್ರದ ವಾಸನೆ ಬಡಿದ ಪರಿಣಾಮ, ಚಿನ್ನಯ್ಯನ ಜತೆಗಿದ್ದವರನ್ನು ವಿಚಾರಣೆಗೊಳಪಡಿಸಿ, ಒಳಸಂಚಿನ ಜಾಲವನ್ನು ಬೇಧಿಸಲು ಮುಂದಾಯಿತು.

ಪ್ರಕರಣದಲ್ಲಿ ಚಿನ್ನಯ್ಯನನ್ನು ಆರೋಪಿ ಮಾಡಿ, ಬಂಧಿಸಿದ ನಂತರ ಒಳಸಂಚಿನ ಆರೋಪದ ಮೇಲೆ ಜಯಂತ್ ತಂಗಚ್ಚನ್, ಯೂಟ್ಯೂಬ್ ಚಾನೆಲ್‌ನವರು, ಕೇರಳ ಯೂಟ್ಯೂಬ್ ಚಾನೆಲ್‌ನ ಮನಾಫ್, ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಅವರನ್ನೂ ವಿಚಾರಣೆ ಮಾಡಲಾಗಿದೆ. ನಂತರದಲ್ಲಿ, ಷಡ್ಯಂತ್ರದಲ್ಲಿ ಇವರೆಲ್ಲರ ಪಾತ್ರವೂ ಇದೆ ಎಂಬ ಮಾತುಗಳು ಕೇಳಿಬಂದವು. ಈಗ ಇದಕ್ಕೆಲ್ಲಾ ಪುಷ್ಟಿ ನೀಡುವಂತೆ- ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿ ವಜಾಗೊಂಡಿರುವುದೂ ಬಹಿರಂಗವಾಗಿದೆ. ಈ ವಿಷಯವನ್ನು ಚಿನ್ನಯ್ಯ ಮತ್ತವರ ಪರ ವಕೀಲರು ರಹಸ್ಯವಾಗಿಟ್ಟದ್ದು, ಅವರ ಮೇಲಿನ ಸಂಶಯ ಹೆಚ್ಚಿರುವ ಜತೆಗೆ ಇಡೀ ನಡೆಗಳೇ ಅನುಮಾನ ಮೂಡಿಸಿವೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ.

ಸುಪ್ರೀಂಕೋರ್ಟ್‌ನಲ್ಲಿದ್ದ ಪ್ರಕರಣದಲ್ಲಿ ಹಿರಿಯ ವಕೀಲ ಕೆ.ವಿ. ಧನಂಜಯ್ ಅವರು ದೂರುದಾರನ ಪರ ವಾದಿಸಿದ್ದರು. ಚಿನ್ನಯ್ಯನನ್ನು ಜುಲೈ ತಿಂಗಳಲ್ಲಿ ಬೆಳ್ತಂಗಡಿ ಕೋರ್ಟ್‌ಗೆ ಕರೆದುಕೊಂಡು ಬರುತ್ತಿದ್ದ ವಕೀಲ ಸಚಿನ್ ದೇಶಪಾಂಡೆ, ಓಜಸ್ವಿ ಗೌಡ ಹೆಸರು ಕೂಡ ಸುಪ್ರೀಂಕೋರ್ಟ್ ಆದೇಶದ ಪ್ರತಿಯಲ್ಲಿದೆ. ಅಂದರೆ, ಸುಪ್ರೀಂಕೋರ್ಟ್‌ನಲ್ಲಿ ವಿಫಲವಾದಾಗ, ಆ ವಿಷಯವನ್ನು ಮುಚ್ಚಿಟ್ಟು, ರಾಜ್ಯ ಸರ್ಕಾರದ ಮೇಲೆ ವಿರಾಟ್ ಸ್ವರೂಪದಲ್ಲಿ ಒತ್ತಡ ಹೇರುವುದು ಈ ತಂಡದ ಉzಶವಾಗಿತ್ತು ಎಂಬ ಚರ್ಚೆಗಳೀಗ ಗರಿಗೆದರಿದೆ. ಈ ಬೆಳವಣಿಗೆಗಳ ಮಧ್ಯೆ ವಕೀಲ ಕೆ.ವಿ. ಧನಂಜಯ ಅವರು ತಾಂತ್ರಿಕ ನೆಲೆಯಲ್ಲಿ ಅರ್ಜಿ ವಜಾಗೊಂಡಿದೆ ಮತ್ತು ಇದು ಕೇಸಿನ ಮೇರಿಟ್ ಮೇಲೆ ಯಾವುದೇ ಹಾನಿಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದಾಗ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರೂ ಸ್ವಾಗತಿಸಿದ್ದರು. ನಿತ್ಯವೂ ಇಷ್ಟೆಲ್ಲಾ ಆರೋಪಗಳನ್ನು ಮಾಡುತ್ತಿರುವಾಗ, ಸತ್ಯ ಹೊರಬರಲಿ ಎನ್ನುವುದು ಅವರ ನಿಲುವಾಗಿತ್ತು. ಆದರೆ, ಶವಗಳನ್ನು ಹೂತು ಹಾಕಲಾಗಿದೆ ಎಂಬ ವಾದಕ್ಕೆ ಬದ್ಧವಾಗಿದ್ದ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನಯ್ಯನ ದೂರನ್ನು ಪ್ರತಿಪಾದಿಸುತ್ತಿದ್ದವರಿಗೂ

ಸುಪ್ರೀಂಕೋರ್ಟ್‌ನಲ್ಲಾದ ಬೆಳವಣಿಗೆ ಬಗ್ಗೆ ಮಾಹಿತಿ ಇರಲಿಲ್ಲವೇ? ಅಥವಾ ಗೊತ್ತಿದ್ದೂ ಅವರು ಮೌನದ ಮೊರೆ ಹೋಗಿದ್ದರೇ ಎಂಬೆಲ್ಲಾ ಪ್ರಶ್ನೆಗಳಿವೆ.
ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಜಾಗೊಂಡಿತ್ತು ಎನ್ನುವುದು ರಾಜ್ಯ ಕಾನೂನು ಇಲಾಖೆ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿತ್ತಾದರೂ, ಇಲ್ಲ ನಮಗೆ ಗೊತ್ತಿತ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕೋರ್ಟ್‌ಗೆ ಹೇಳಬೇಕಿತ್ತಲ್ಲವೇ?: ಧರ್ಮಸ್ಥಳ ಬುರುಡೆ ಕೇಸಿನ ಆಳ-ಅಗಲದ ಬಗ್ಗೆ ಮಾಧ್ಯಮ ಸೇರಿದಂತೆ ಎಲ್ಲೆಡೆ ಚರ್ಚೆ ಮಾಡುತ್ತಿದ್ದ ಚಿನ್ನಯ್ಯರ ಬೆಂಬಲಿಗ ಪಡೆ, ಈ ವಿಷಯವನ್ನು ಬೆಳ್ತಂಗಡಿ ಕೋರ್ಟ್‌ನಿಂದಲೂ ಮುಚ್ಚಿಟ್ಟದ್ದು ಏಕೆ? ಇದು ಕಾನೂನಾತ್ಮಕವಾಗಿ ಸರಿಯೇ ಎಂಬುದೂ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವನ್ನು ಕೋರ್ಟ್ ಕಣ್ಣಿಂದಲೂ ದೂರವಿಟ್ಟದ್ದರ ಉzಶ ಏನು? ಸರ್ಕಾರಕ್ಕೆ ಹೇಳುತ್ತಿದ್ದರೆ ಎಸ್‌ಐಟಿ ರಚನೆ ಸಾಧ್ಯವಾಗುವುದಿಲ್ಲ ಎಂಬ ಆತಂಕ ಚಿನ್ನಯ್ಯ ಮತ್ತವರ ಬೆಂಬಲಿಗರಲ್ಲಿ ಇತ್ತೇ ಎಂಬ ಅನುಮಾನವಿದೆ.

ಆಗ ಸುಜಾತ ಭಟ್, ಈಗ ಇದು..!: ಧರ್ಮಸ್ಥಳದ ಅಸಹಜ ಸಾವುಗಳ ದೂರುಗಳ ಮಧ್ಯೆ ನನ್ನ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ೩೦ ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು ಎಂದು ಕಥೆ ಕಟ್ಟಿದ್ದ ಸುಜಾತ ಭಟ್, ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿದ್ದರು. ನಂತರ ಅವರು ಹೇಳಿದ್ದೆಲ್ಲಾ `ಬುರುಡೆ’ ಎನ್ನುವುದು ಬಯಲಾಯ್ತು. ಈಗ, ಸುಪ್ರೀಂಕೋರ್ಟ್‌ನಲ್ಲಿ ಕೇಸು ವಜಾಗೊಂಡ ವಿಷಯವನ್ನು ಚಿನ್ನಯ್ಯ, ಆತನ ಬೆಂಬಲಿಗರು, ವಕೀಲರು ಮುಚ್ಚಿಟ್ಟಿದ್ದು ಬಯಲಾಗಿರುವುದರಿಂದ “ಬುರುಡೆ ಕೇಸ್” ದೂರುದಾರರ ವಿಶ್ವಾಸಾರ್ಹತೆಗೆ ಪೆಟ್ಟು ಬಿದ್ದಿದೆ.

Exit mobile version