ಧರ್ಮಸ್ಥಳ: ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಮತ್ತು ಷಡ್ಯಂತ್ರ ಮಾಡಿದವರಿಗೆ ಅಣ್ಣಪ್ಪ ಸ್ವಾಮಿ, ಮಂಜುನಾಥ ಹಾಗೂ ಉಲ್ಲಾಳ್ತಿ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಸೆ. 26ರಂದು ಗ್ರಾಮದ ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿಯ ಭಕ್ತಾದಿಗಳು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಂಜುನಾಥನ ಸನ್ನಿಧಿ ಮುಂದೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ ಭಕ್ತರು ಮೆರವಣಿಗೆ ಮೂಲಕ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಸಾಗಿ ಅಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಸೇರಿದ್ದರು. ನಂತರ ಮೆರವಣಿಗೆ ಅಮೃತವರ್ಷಿಣಿಗೆ ಸಾಗಿ ಸಹಸ್ರ ಲಲಿತಾ ಪಂಚಾಕ್ಷರಿ ನಾಮ ಪಠಣ ಸಲ್ಲಿಸಲಾಯಿತು. ಬಂದ ಮಹಿಳಾ ಭಕ್ತಾದಿಗಳಿಗೆ ಬಾಗಿನ ನೀಡಿ ಗೌರವಿಸಲಾಯಿತು.
ಹಿತರಕ್ಷಣಾ ಸಮಿತಿಯು ಕಳೆದ ಮಾ. 27ರಂದು ನಡೆಸಿದ ಸಮಾವೇಶದಲ್ಲಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆ ಆಗಬೇಕೆಂದು ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕ್ಷೇತ್ರದ ವಿರುದ್ಧ ನಡೆದ ಎಲ್ಲಾ ಅಪಪ್ರಚಾರಗಳು ಒಂದೊಂದಾಗಿ ಹೊರಬರುತ್ತಿತ್ತು, ಎಲ್ಲಾ ಅಪಪ್ರಚಾರಗಳಿಗೂ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.
ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳದ ಉಗ್ರಾಣದ ಹಿರಿಯ ಮುತ್ಸದ್ಧಿ ಭುಜಬಲಿ ಉದ್ಘಾಟಿಸಿದರು. ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಕೋಶಾಧಿಕಾರಿ ಶ್ರೀನಿವಾಸ್ ರಾವ್ ಧರ್ಮಸ್ಥಳ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಹರೀದಾಸ್ ಗಾಂಭೀರ, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅದ್ಯಕ್ಷ ಕೇಶವ ಪಿ. ಗೌಡ ಬೆಳಾಲು , ಸುಬ್ರಮಣ್ಯ ಪ್ರಸಾದ್, ವೀರು ಶೆಟ್ಟಿ, ಪ್ರೀತಂ ಡಿ ಪೂಜಾರಿ ಧರ್ಮಸ್ಥಳ, ಶಾಂಭವಿ ರೈ ಧರ್ಮಸ್ಥಳ, ಧನಕೀರ್ತಿ ಅರಿಗ ಧರ್ಮಸ್ಥಳ, ಅಖಿಲ್ ಶೆಟ್ಟಿ ನೇತ್ರಾವತಿ, ಪ್ರಭಾಕರ್ ಪೂಜಾರಿ ಕನ್ಯಾಡಿ, ಪೂರನ್ ವರ್ಮಾ, ಸೀತಾರಾಮ್ ತೊಲ್ಪಡಿತ್ತಾಯ ಉಪಸ್ಥಿತರಿದ್ದರು. ಗ್ರಾಮಸ್ಥರು, ಧರ್ಮಸ್ಥಳದ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.