Site icon Suddi Belthangady

ಜಾತಿ ಗಣತಿ ಸಮೀಕ್ಷೆಯಲ್ಲಿ ಬಂಟ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಬಂಟ, ಪರ್ಯಾಯ ಹೆಸರು ನಾಡವ ಎಂದು ನಮೂದಿಸಿ: ಬಂಟ ಸಂಘದ ಅಧ್ಯಕ್ಷ ಜಯಂತ್‌ ಶೆಟ್ಟಿ ಹೇಳಿಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಪ್ರಾರಂಭಿಸಿರುತ್ತದೆ. ಸಮೀಕ್ಷೆ ನಡೆಸುವವರು ತಮ್ಮ ಮನೆಗೆ ಬಂದಾಗ ಈ ಕೆಳಗಿನಂತೆ ಮಾಹಿತಿಯನ್ನು ನೀಡಬೇಕಾಗಿ ಬಂಟರ ಸಂಘದಿಂದ ತಿಳಿಸಲಾಗಿದೆ.

ಸಮೀಕ್ಷೆ ನಡೆಸುವವರ ಮೊಬೈಲ್ ಆಪ್‌ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಬೇಕು. 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್‌ ಸಂಖ್ಯೆ (A -0227)ರಂತೆ ಬಂಟ (Bunt) ಎಂದು ನಮೂದಿಸಬೇಕು. 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-1026)ರಂತೆ ನಾಡವ (Nadava) ಎಂದು ನಮೂದಿಸಬೇಕು.

ಬಂಟರಲ್ಲಿ ಶೆಟ್ಟಿ, ಆಳ್ವ, ಸಾಮಾನಿ, ಭಂಡಾರಿ, ಅಡಪ, ಅಡ್ಯಂತಾಯ, ಪೂಂಜ, ಚೌಟಿ ಮುಂತಾದ ಕುಲನಾಮಗಳು (Surname) ಇದ್ದು ಇವುಗಳು ಜಾತಿ ಸೂಚಕ ಪದಗಳು ಆಗಿರುವುದಿಲ್ಲ. ಆದುದರಿಂದ ಎಲ್ಲಿಯೂ ತಮ್ಮ ಕುಲನಾಮಗಳನ್ನು ಪ್ರಸ್ತಾಪಿಸದೇ ಜಾತಿ ಕಾಲಂನಲ್ಲಿ ಬಂಟ ಎಂಬುದಾಗಿಯೂ ಸಮಾನಾರ್ಥದ (ಪರ್ಯಾಯ) ಹೆಸರು ಎಂಬಲ್ಲಿ ನಾಡವ ಎಂಬುದಾಗಿಯೂ ನಮೂದಿಸತಕ್ಕದ್ದು.

ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಜಾತಿ ಸಮೀಕ್ಷೆ ಅತ್ಯಂತ ಪ್ರಾಮುಖ್ಯವಾಗಿದ್ದು ಪ್ರತಿಯೊಬ್ಬರೂ ಮೇಲೆ ತಿಳಿಸಿದಂತೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ತಿಳಿಸಿದ್ದಾರೆ.

Exit mobile version