ಬಂಗಾಡಿ: ವರ್ಷದಲ್ಲಿ ಸಂಘವು 1,983 ಕೋಟಿ ರೂ.ಗಿಂತ ಅಧಿಕ ವ್ಯವಹಾರವನ್ನು ನಡೆಸಿದ್ದು 4.81 ಕೋಟಿ ರೂ.ಗಿಂತ ಅಧಿಕ ಲಾಭಗಳಿಸಿದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ. 18 ಡಿವಿಡೆಂಟ್ ನೀಡಲಾಗುವುದು ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹೇಳಿದರು.
ಅವರು ಸೆ.22ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಸಂಘದ 49ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು 6,518 ಎ ತರಗತಿ ಸದಸ್ಯರಿದ್ದು, 7.38 ಕೋಟಿಗಿಂತ ಅಧಿಕ ಪಾಲು ಬಂಡವಾಳ ಸಂಗ್ರಹಿಸಿದೆ. 143 ಕೋಟಿ ರೂ.ಗಿಂತ ಅಧಿಕ ಠೇವಣಾತಿಗಳನ್ನು ಹೊಂದಿದೆ. ಎಂಕೆಸಿಸಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ವೈಯಕ್ತಿಕ ಸಾಲ, ಪಶುಸಂಗೋಪನ ಸಾಲ, ಭೂಮಿ ಖರೀದಿ ಸಾಲ, ಗ್ರಾಹಕ ವಸ್ತು ಸಾಲ, ಸೌಭಾಗ್ಯ ಕಿರು ಸಾಲ, ವೇತನ ಆಧಾರಿತ ಸಾಲ ಅಡಮಾನ ಸಾಲ, ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಸೇರಿದಂತೆ ಸದಸ್ಯರಿಗೆ ನಾನಾ ರೀತಿಯ ಸಾಲಗಳನ್ನು ವಿತರಿಸಲಾಗಿದ್ದು ವರದಿ ಸಾಲಿನಲ್ಲಿ ಶೇ. 99.10 ಸಾಲ ವಸೂಲಾಗಿರುತ್ತದೆ ಎಂದರು.
ಸಂಘವು ಬಂಗಾಡಿಯಲ್ಲಿ ಮುಖ್ಯ ಕಚೇರಿ ಹೊಂದಿದ್ದು ನಾವೂರು, ಕನ್ಯಾಡಿ, ಕಡಿರುದ್ಯಾವರ, ಮಿತ್ತಬಾಗಿಲು,ದಿಡುಪೆ, ಕಿಲ್ಲೂರು, ಇಂದಬೆಟ್ಟು ಹಾಗೂ ಪಡ್ಪು ಎಂಬಲ್ಲಿ ಶಾಖೆಗಳನ್ನು ಹೊಂದಿದ್ದು ರಬ್ಬರ್ ಖರೀದಿ, ಅಡಕೆ ಖರೀದಿ, ರಸಗೊಬ್ಬರ ಮಾರಾಟ, ಆರ್.ಟಿ.ಜಿ.ಎಸ್, ಸೇಫ್ ಲಾಕರ್, ಪಹಣಿ ಪತ್ರ ನೀಡಿಕೆ ಮೊದಲಾದ ವ್ಯವಹಾರಗಳನ್ನು ನಡೆಸುತ್ತಿದೆ ಎಂದರು.
ಉಪಾಧ್ಯಕ್ಷ ಕೆ.ಆನಂದ ಗೌಡ, ನಿರ್ದೇಶಕರಾದ ಕೆ. ಪುಷ್ಪಲತಾ, ಕೆ.ವಸಂತ ಗೌಡ, ರಮೇಶ್ ಕೆಂಗಾಜೆ,ವಿನಯಚಂದ್ರ, ರಘುನಾಥ, ಸತೀಶ್ ನಾಯ್ಕ,ಶೀನಪ್ಪ ಗೌಡ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್, ವೇದಾವತಿ ಹಾಗೂ ಸಿಇಒ ದಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಿಬ್ಬಂದಿ ರಮಾನಂದ ಕಾರ್ಯಕ್ರಮ ನಿರ್ವಹಿಸಿದರು.