Site icon Suddi Belthangady

ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ-ಎಲ್ಲರ ಪ್ರೀತಿ, ವಿಶ್ವಾಸ, ಗೌರವ,ಅಭಿಮಾನವೇ ನಮಗೆ ಶ್ರೀರಕ್ಷೆ: ಡಾ.ಹೆಗ್ಗಡೆ

ಉಜಿರೆ: ಮಂಗಳೂರು, ಬೆಂಗಳೂರು, ಹಾಸನ, ಉಡುಪಿ, ಉಜಿರೆ, ಧಾರವಾಡ ಹಾಗೂ ಮೈಸೂರಿನಲ್ಲಿರುವ ಕೆ.ಜಿ. ಯಿಂದ ಪಿ.ಜಿ ವರೆಗಿನ ೫೬ ಶಿಕ್ಷಣ ಸಂಸ್ಥೆಗಳ ಸುಮಾರು 10,000ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸೆ.21ರಂದು ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಎಂ. ಮೋಹನ ಆಳ್ವ ಮಾತನಾಡಿ “ವೀರೇಂದ್ರ ಹೆಗ್ಗಡೆಯವರು ತನ್ನ ಸಾರ್ಥಕ ಬದುಕಿನ ಪ್ರೇರಕರು, ಮಾರ್ಗದರ್ಶಕರು ಹಾಗೂ ಗುರುಗಳಾಗಿದ್ದು ತಾನು ಅವರ ಅಭಿಮಾನಿ ಶಿಷ್ಯ ಎಂದು ಹೇಳಿದರು.

ಹೆಗ್ಗಡೆಯವರ ದಕ್ಷ ನಾಯಕತ್ವ, ತಾಳ್ಮೆ, ವಿವೇಕ, ಸಂಯಮ ಹಾಗೂ ಸ್ಥಿತಪ್ರಜ್ಞ ಗುಣವನ್ನು ಶ್ಲಾಘಿಸಿದ ಆಳ್ವರು ಅವರು ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎಂದು ಬಣ್ಣಿಸಿದರು. ರಾಜನೂ, ಋಷಿಯೂ ಆಗಿರುವ ಹೆಗ್ಗಡೆಯವರು ನಿಜವಾದ ಅರ್ಥದಲ್ಲಿ “ರಾಜರ್ಷಿ” ಎಂದು ಶ್ಲಾಘಿಸಿದರು. ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸಗಳಿಗೆ ಹೆಗ್ಗಡೆಯವರ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸಿದರು.

ಉಡುಪಿಯಲ್ಲಿರುವ ಎಸ್.ಡಿ.ಎಮ್. ಆಯುರ್ವೇದ ಕಾಲೇಜು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದರು. ಹಾಸನ ಮತ್ತು ಬೆಂಗಳೂರಿನಲ್ಲಿರುವ ಎಸ್.ಡಿ.ಎಮ್. ಆಯುರ್ವೇದ ಕಾಲೇಜುಗಳು ಮತ್ತು ಆಸ್ಪತ್ರೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿವೆ. ಉಜಿರೆ ಮತ್ತು ಧರ್ಮಸ್ಥಳದಲ್ಲಿರುವ ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕೂಡಾ ಉತ್ತಮ ಸೇವೆಯಲ್ಲಿ ಚಿರಪರಿಚಿತವಾಗಿವೆ ಎಂದರು.

ಹೆಗ್ಗಡೆಯವರು ಹಾಗೂ ಧರ್ಮಸ್ಥಳದ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಮತ್ತು ವದಂತಿಗಳನ್ನು ಖಂಡಿಸಿದ ಅವರು ಹೆಗ್ಗಡೆಯವರ ಜೊತೆ ಹಿರಿಯ ವಿದ್ಯಾರ್ಥಿಗಳೆಲ್ಲರೂ “ಧರ್ಮ ಸಿಪಾಯಿ” ಗಳಾಗಿ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಆಗಿರುತ್ತೇವೆ ಎಂದು ಭರವಸೆ ನೀಡಿದರು.

ಪೂನಾದ ಕಾನೂನು ಕಾಲೇಜಿನ ಡೀನ್ ಹಾಗೂ ಮಂಗಳೂರಿನ ಎಸ್.ಡಿ.ಎಮ್. ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಪ್ರೊ. ಶಶಿಕಲಾ ಗುರುಪುರ ಮಾತನಾಡಿ, ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ. ಹೆಗ್ಗಡೆಯವರು ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಕಾಯಕ, ದುರ್ಬಲ ವರ್ಗದವರ ಸಬಲೀಕರಣ, ಮಹಿಳಾ ಸಬಲೀಕರಣ, ಸಮರ್ಪಣಾ ಮನೋಭಾವ, ತ್ಯಾಗ, ನಿಷ್ಠೆ, ಏಕಾಗ್ರತೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು, ಹೆಗ್ಗಡೆಯವರು ಒಬ್ಬ “ದೇವಮಾನವ” ಎಂದರು.

ಧಾರವಾಡದ ಎಸ್.ಡಿ.ಎಮ್. ವೈದ್ಯಕೀಯ ಕಾಲೇಜಿನ ಡಾ. ಅನಿಲ್ ಮಾತನಾಡಿ “ಧಾರವಾಡದಲ್ಲಿ ಹೆಗ್ಗಡೆಯವರ ನೇತೃತ್ವದಲ್ಲಿ ಎಸ್.ಡಿ.ಎಮ್. ಸಂಸ್ಥೆಗಳ ಸೇವೆ-ಸಾಧನೆಯನ್ನು ಶ್ಲಾಘಿಸಿದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಎಲ್ಲರೂ ಧರ್ಮಸ್ಥಳದ ರಾಯಭಾರಿಗಳಾಗಿದ್ದು ಹೆಗ್ಗಡೆಯವರ ಸೇವಾ ಕಾರ್ಯಗಳಿಗೆ ತೊಂದರೆಯಾಗದಂತೆ ನಿರಂತರ ಬೆಂಬಲ ನೀಡುವುದಲ್ಲದೆ ಹೆಗ್ಗಡೆಯವರ ಜೊತೆ ಸದಾ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಭರವಸೆ ನೀಡಿದರು.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವರ ಅನುಗ್ರಹದೊಂದಿಗೆ, ಎಲ್ಲರ ಪ್ರೀತಿ-ವಿಶ್ವಾಸ, ಗೌರವ ಹಾಗೂ ಅಭಿಮಾನವೇ ತಮಗೆ ಶ್ರೀರಕ್ಷೆಯಾಗಿದೆ. ತನ್ನ ಸೇವಾಕಾರ್ಯಗಳನ್ನು ಮುಂದುವರಿಸಲು ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು. ಎಲ್ಲಾ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ. ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಮಾಜದ ಸಭ್ಯ ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತದೆ.

ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿದರು.ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು. ಮೂಡಬಿದ್ರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಠರಾವು ಮಂಡನೆ: 1.ಎಲ್ಲಾ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸದೃಢಗೊಳಿಸಿ ಪ್ರತಿವರ್ಷ ಆಯಾ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಸುವುದು.

2.ಹಿರಿಯ ವಿದ್ಯಾರ್ಥಿಗಳು ಸದಾ ಹೆಗ್ಗಡೆಯವರ ಬೆಂಬಲಕ್ಕೆ ಬದ್ಧರು ಹಾಗೂ ಸಿದ್ಧರು.

3.ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವುದು. ಮೇಲಿನ ಮೂರು ಠರಾವುಗಳನ್ನು ಮಂಡಿಸಿ ಕದ್ರಿ ನವನೀತ ಶೆಟ್ಟಿ ಸಾದರಪಡಿಸಿ ಎಲ್ಲರ ಅಂಗೀಕಾರ ಪಡೆದರು. ಜಾಲತಾಣಗಳಲ್ಲಿ ಹಾಗೂ ಸಮೂಹ ಮಾಧ್ಯಮಗಳಲ್ಲಿ ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳನ್ನು ತಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಯವರಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಯಿತು.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಧನ್ಯವಾದವಿತ್ತರು.

Exit mobile version