ಬೆಳ್ತಂಗಡಿ: ವೈಜ್ಞಾನಿಕ ಅಧ್ಯಯನಗಳ ಮೂಲಕ ಹೋಮಿಯೋಪಥಿಗೆ ಇನ್ನೂ ಹೆಚ್ಚಿನ ಮಾನ್ಯತೆ ಸಿಗಬೇಕು ಎಂದು ದೆಹಲಿಯ ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಪರಿಷತ್‌ನ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷ ಡಾ. ಎ. ಎಸ್. ಕುಮಾರ್ ಮಿತ್ರಚಂದ್ರ ಧಾವಲೆ ಹೇಳಿದರು.
ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ನಡೆಯುತ್ತಿರುವ 2 ದಿನಗಳ ಪ್ರೊವಿನಿಯೋ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೊಮಿಯೋಪತಿ ಪಠ್ಯಕ್ರಮದಲ್ಲಿ ಸಂಶೋಧನಾ ವಿಧಾನಶಾಸ್ತ್ರ ವಿಷಯವನ್ನು ಪರಿಚಯಿಸಿರುವುದು ಉತ್ತಮ ನಿರ್ಧಾರ. ಇದರಿಂದ ಹೋಮಿಯೋಪಥಿ ವಿದ್ಯಾರ್ಥಿಗಳಿಗೆ ಹೋಮಿಯೋಪಥಿಯನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು, ಸಂಶೋಧನೆ ನಡೆಸಲು ಮತ್ತು ಲೇಖನಗಳನ್ನು ಪ್ರಕಟಿಸಲು ಸಹಾಯವಾಗುತ್ತದೆ. ಹೋಮಿಯೋಪಥಿಯಲ್ಲಿ ವೈಜ್ಞಾನಿಕವಾಗಿ ಸಾಬೀತಾದ ಅಧ್ಯಯನಗಳು ಮತ್ತು ಅವುಗಳ ಪ್ರಕಟಣೆಗಳಿಲ್ಲದೆ, ಅದಕ್ಕೆ ತಕ್ಕ ಮಾನ್ಯತೆ ಸಿಗುವುದಿಲ್ಲ. ಹೋಮಿಯೋಪಥಿಗೆ 250 ವರ್ಷಗಳ ಇತಿಹಾಸವಿದ್ದರೂ, ಅದನ್ನು ವಿಜ್ಞಾನವೆಂದು ಸ್ವೀಕರಿಸುವಲ್ಲಿ ಇನ್ನೂ ಅಡೆತಡೆಗಳಿವೆ. ವೈಜ್ಞಾನಿಕ ಅಧ್ಯಯನಗಳ ಚರ್ಚೆ ಇನ್ನಷ್ಟು ವಿಚಾರ ಸಂಕಿರಣಗಳಲ್ಲಿ ನಡೆಯಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಭಾರತ ಅತ್ಯಂತ ಶ್ರೀಮಂತ ಮಾನವ ಸಂಪನ್ಮೂಲ ಹೊಂದಿದ ದೇಶ. ಈ ಸಂಪನ್ಮೂಲದ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ವೈದ್ಯಕೀಯ ಕ್ಷೇತ್ರಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಸ್ವಾತಂತ್ರ‍್ಯಪೂರ್ವ ಹಾಗೂ ಸ್ವಾತಂತ್ರ‍್ಯ ನಂತರದಲ್ಲಿ ಜನರ ಜೀವಿತದ ಸರಾಸರಿ ವರ್ಷಗಳು ಹೆಚ್ಚಾಗಿದೆ. ಜನರು ಮೂಢನಂಬಿಕೆಗಳಿಗೆ ಬಲಿಯಾಗದೆ, ವೈಜ್ಞಾನಿಕ ಮನೋಧರ್ಮದ ಮೂಲಕ ಹೋಮಿಯೋಪತಿಯನ್ನು ಬೆಳೆಸಿ ಎಂದು ಕರೆ ನೀಡಿದರು.
ಎರಡು ದಿನ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ಹೋಮಿಯೋಪಥಿ ಕ್ಷೇತ್ರದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಸಂಶೋಧಕರಿAದ ಪೇಪರ್ ಪ್ರೆಸೆಂಟೇಷನ್ ಇರಲಿವೆ. ಕಾರ್ಯಕ್ರಮದಲ್ಲಿ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಮೆಡಿಕಲ್ ಕ್ಯಾಂಪ್ ಗಳಿಗೆ ಸಹಕಾರ ನೀಡಿದ ಮೂಡುಬಿದಿರೆಯ ವಿವಿಧ ಸಮಾಜ ಸೇವಕರಾದ ಅಮರ್ ಕೋಟೆ, ಪುತ್ತಿಗೆ ಸೋಮನಾಥೇಶ್ವರ ದೇವಾಲಯದ ಅರ್ಚಕ ಅಡಿಗಲ್ ಅನಂತಕೃಷ್ಣ ಭಟ್, ಅಕ್ಷಯ್ ಜೈನ್, ಭಾರವಿ ಹಾಗೂ ಧರಮೆಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಕೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ರೋಷನ್ ಪಿಂಟೋ, ಕಾರ್ಯಕ್ರಮ ಸಂಯೋಜಕಿ ಡಾ. ವಸುಮತಿ ಕೋಡಿಕಲ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.