Site icon Suddi Belthangady

ತಿಮರೋಡಿ ತಂಡದ ವಿರುದ್ಧ ಎಸ್.ಐ.ಟಿಗೆ ಕೋಲಾರ ಜನಪರ ವೇದಿಕೆಯಿಂದ ದೂರು-ಕೋಕಾ, ಗೂಂಡಾ ಕಾಯ್ದೆ ಮತ್ತು ಗಡಿಪಾರು ಅಡಿಯಲ್ಲಿ ಎಫ್‌.ಐ.ಆ‌ರ್. ದಾಖಲಿಸಲು ದೂರು

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರವನ್ನು ನಡೆಸಿದ್ದಾರೆಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ತಂಡದ ವಿರುದ್ದ ಎಸ್ಐಟಿಗೆ ಕೋಲಾರ ಜನಪರ ವೇದಿಕೆಯವರು ಸೆ.20ರಂದು ದೂರು ನೀಡಿದ್ದಾರೆ.

ಕೋಕಾ, ಗೂಂಡಾ ಕಾಯ್ದೆ ಮತ್ತು ಗಡಿಪಾರು ಅಡಿಯಲ್ಲಿ ಎಫ್‌ಐಆ‌ರ್ ದಾಖಲಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಧ್ಯಕ್ಷ ನಾಗರಾಜ್ ಜಿ. ಹಾಗೂ ತಂಡದಿಂದ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವ‌ರ್, ವಿಠಲ್ ಗೌಡ, ಯು ಟ್ಯೂಬರ್ ಸಮೀರ್, ಜಯಂತ್ ಮತ್ತು ಇನ್ನಿತರರ ವಿರುದ್ದ ದೂರು ದಾಖಲಿಸಿದ್ದಾರೆ.

ಈ ವೇಳೆ ಮಾತನಾಡಿದ ಕೋಲಾರ ಜನಪರ ವೇದಿಕೆಯ ವೆಂಕಾಚಲಯ್ಯ ಮಾತನಾಡಿ” ಶ್ರೀ ಕ್ಷೇತ್ರಕ್ಕೆ ಮಸಿ ಬಳಿಯಲು ಹುನ್ನಾರ ನಡೆಸುತ್ತಿರುವ ಎಲ್ಲಾ ಸದಸ್ಯರ ವಿರುದ್ಧ ತುರ್ತು ಕ್ರಮ ವಹಿಸಬೇಕು, ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಕುಟುಂಬದವರ ವಿರುದ್ಧ ವಿನಾಕಾರಣ ಸೂಕ್ತ ದಾಖಲೆ ಇಲ್ಲದೇ ಆರೋಪ ಮಾಡಿದ್ದಾರೆ.

ಶ್ರೀ ಕ್ಷೇತ್ರದ ಬೆಳವಣಿಗೆಗೆ ಹಾಗೂ ವರ್ಚಸ್ಸಿಗೆ ಕುಂದು ತರುವ ದುರುದ್ದೇಶದಿಂದ ಬುರುಡೆ ಗ್ಯಾಂಗಿನ ಸದಸ್ಯರುಗಳು ಮೇಲಿಂದ ಮೇಲೆ ಆರೋಪ ಮಾಡ್ತಿದ್ದಾರೆ. ಧರ್ಮಸ್ಥಳದ ಹಾಗೂ ಅಣ್ಣಪ್ಪ ಸ್ವಾಮಿ, ಶ್ರೀಮಂಜುನಾಥನ ಹೆಸರಿಗೆ ಕಳಂಕ ತಂದು ಪಿತೂರಿ ನಡೆಸಿದ್ದಾರೆ, ಶ್ರೀಕ್ಷೇತ್ರದ ವಿರುದ್ಧ ಪಿತೂರಿ ನಡೆಸಿ ಕೆಲ ಸ್ಥಳೀಯ ಜನರನ್ನು ಹಾಗೂ ಸ್ಥಳೀಯ ಸಂಘಟನೆಗಳನ್ನು ತಪ್ಪುದಾರಿಗೆ ಎಳೆದಿದ್ದಾರೆ, ಸರ್ಕಾರದ ಹಾಗೂ ಸಾರ್ವಜನಿಕರ ಹಣವನ್ನು ಹೆಣ ಹುಡುಕಲು ಹಣವನ್ನು ಪೋಲು ಮಾಡಲು ಕಾರಣಿಕರ್ತರಾಗಿರುತ್ತಾರೆ. ಪಶ್ಚಿಮ ಘಟ್ಟಗಳಲ್ಲಿ ಇಟಾಚಿಗಳ ಮುಖಾಂತರ ಹಲವಾರು ಗುಂಡಿಗಳನ್ನು ತೆಗೆಸಿರುವುದು ಪರಿಸರಕ್ಕೆ ಹಾನಿ ಉಂಟಾಗಿರುತ್ತದೆ.

ಆದ್ದರಿಂದ ಈ ಎಲ್ಲಾ ಬುರುಡೆ ಗ್ಯಾಂಗ್ ಸದಸ್ಯರ ವಿರುದ್ಧ ಕೋಕಾ ಮತ್ತು ಗೂಂಡ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಬೇಕು, ಇವರೆಲ್ಲರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು,ಇವರುಗಳಿಗೆ ವಿದೇಶಗಳಿಂದ ಹಣದ ಹೊಳೆ ಹರಿದು ಬಂದಿರುವ ಸಾಧ್ಯತೆ ಇರುತ್ತದೆ, ಕಾನೂನುಬಾಹಿರವಾಗಿ ಪಡೆದುಕೊಂಡಿರುವ ಹಣದ ಮೂಲವನ್ನು ಪತ್ತೆ ಹಚ್ಚಬೇಕು,
ಇವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಸರ್ಕಾರಕ್ಕೆ ಆಗಿರುವ ಹಾನಿಯನ್ನು ಭರಿಸಬೇಕು ಮತ್ತು ಶ್ರೀ ಕ್ಷೇತ್ರದ ವಿರುದ್ಧ ಮಾಡಿರುವ ಗುರುತರ ಸುಳ್ಳು ಆರೋಪಗಳಿಗೆ ಮಾನಹಾನಿ ಪ್ರಕರಣ ದಾಖಲಿಸಿ ಎಂದು ದೂರು ನೀಡಿದ್ದೇವೆ”ಎಂದರು.

Exit mobile version