ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯ ಕುಮಾರಿ ಮಾತನಾಡಿ “ಪ್ರಜಾಪ್ರಭುತ್ವವು ಪ್ರತಿಯೊಬ್ಬರಿಗೂ ಕೊಟ್ಟಿರುವ ಮತದಾನದ ಹಕ್ಕು ಬಹಳ ಅಮೂಲ್ಯವಾದುದು. ಆದರೆ ಚುನಾವಣೆಯಲ್ಲಿ ಭಾಗವಹಿಸದೆ ಇದ್ದರೆ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಆಗದೆ ನಮ್ಮ ಹಕ್ಕಿನ ಅಪಮೌಲ್ಯವಾಗುತ್ತದೆ. ಆದುದರಿಂದ ಮತದಾನದ ಹಕ್ಕನ್ನು ಸರಿಯಾಗಿ ಬಳಸಿಕೊಳ್ಳುವ ಗುರಿಯನ್ನು ಪ್ರತಿಯೊಬ್ಬರೂ ಹೊಂದಿರಬೇಕು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಪ್ರಾಂಶುಪಾಲ ಡಾ.ರಾಜೇಶ್ ಬಿ. “ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದ ಆಡಳಿತ ಪ್ರತಿಯೊಬ್ಬ ಪ್ರಜೆಗಳಿಗೂ ಮಾನ್ಯತೆ ಕೊಡುತ್ತದೆ. ಯುವ ಜನಾಂಗಕ್ಕೆ ಪ್ರಜಾಪ್ರಭುತ್ವದ ಮಹತ್ವ ಕುರಿತು ಸರಿಯಾದ ಮಾಹಿತಿ ಸಿಕ್ಕಿದರೆ ಅದು ಇನ್ನಷ್ಟು ಸದೃಢಗೊಳ್ಳಲು ಸಾಧ್ಯ “ಎಂದು ಹೇಳಿದರು. ವೇದಿಕೆಯಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್ ಸಹ ಯೋಜನಾಧಿಕಾರಿ ಶೋಭಾ ಉಪಸ್ಥಿತರಿದ್ದರು. ಸ್ವಯಂ ಸೇವಕಿ ಧನ್ಯ ಸ್ವಾಗತಿಸಿ ಮೌಲ್ಯ ವಂದಿಸಿದರು.