Site icon Suddi Belthangady

ಧರ್ಮಸ್ಥಳ: ಸಮಾಧಿ ಶೋಧ ಪ್ರಕರಣ- ಹೈಕೋರ್ಟ್‌ನಲ್ಲಿ ಹೈವೋಲ್ಟೇಜ್ ವಿಚಾರಣೆ

ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿರುವ ಶಂಕಿತ ಸ್ಥಳಗಳ ಕುರಿತು ಸಮಾಧಿ ಶೋಧಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ರಿಟ್ ಅರ್ಜಿಗಳ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಬೆಳವಣಿಗೆಗಳನ್ನು ದಾಖಲಿಸಿದೆ. ಪುರಂದರ ಗೌಡ ಮತ್ತು ತುಕಾರಾಂ ಗೌಡ ಎಂಬ ಸ್ಥಳೀಯರು ಗುರುತಿಸಿದ 13 ಸ್ಥಳಗಳಲ್ಲಿ ಶೋಧ ನಡೆಸುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಸರ್ಕಾರ ಮತ್ತು ದೂರುದಾರರ ಪರ ವಕೀಲರಿಂದ ಗಂಭೀರ ಪ್ರಶ್ನೆಗಳನ್ನು ಕೇಳಿತು.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ದೂರುದಾರರ ಪರ ವಕೀಲ ದೀಪಕ್ ಅವರನ್ನು ಪ್ರಶ್ನಿಸಿ, “ಚಿನ್ನಯ್ಯನ ಹೇಳಿಕೆಯ ಹೊರತಾಗಿ ನಿಮ್ಮ ಬಳಿ ಇನ್ನೇನಾದರೂ ಹೆಚ್ಚುವರಿ ಮಾಹಿತಿ ಇದೆಯೆ?” ಎಂದು ಕೇಳಿದರು.

“ನಿಮಗೆ ಅವಕಾಶ ಕೊಟ್ಟರೆ ಮತ್ತಷ್ಟು ಜನ ಮಾಹಿತಿ ಗೊತ್ತು ಅಂತ ಬರಬಹುದು. ಆದರೆ ಈಗಲೇ ಮಾಹಿತಿ ಕೊಡಿ, ನಂತರ ನಿಮ್ಮ ವಾದ ಕೇಳುತ್ತೇವೆ” ಎಂದು ನ್ಯಾಯಮೂರ್ತಿ ಸೂಚಿಸಿದರು.

ಅನನ್ಯಾ ಭಟ್ ಪ್ರಕರಣದ ಉಲ್ಲೇಖ ಮತ್ತಷ್ಟು ಸಮಾಧಿ ಶೋಧಕ್ಕೆ ಸಲ್ಲಿಸಲಾದ ಅರ್ಜಿ ವಿಚಾರಣೆಯಲ್ಲಿ ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ಅವರು ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಉಲ್ಲೇಖಿಸಿದರು.

“ಅನನ್ಯಾ ಭಟ್ ಎಂದು ಹೇಳಿದ ಯುವತಿ ವಿಚಾರಣೆಯ ಬಳಿಕ ಅಸ್ತಿತ್ವದಲ್ಲಿಲ್ಲ ಎಂಬುದು ಗೊತ್ತಾಯಿತು. ಫೋಟೋದಲ್ಲಿದ್ದ ಮಹಿಳೆ ಈಗಾಗಲೇ ಮೃತಪಟ್ಟಿದ್ದಾರೆ” ಎಂದು ಜಗದೀಶ್ ಹೇಳಿದರು

“ಆ ಮಹಿಳೆ ಪರವಾಗಿ ವಕೀಲರು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ. ಇದು ಗೊಂದಲಮಯ ಪರಿಸ್ಥಿತಿ. ಹೀಗಾಗಿ ಮತ್ತಷ್ಟು ಶೋಧಕ್ಕೆ ಅವಕಾಶ ನೀಡಬಾರದು” ಎಂದು ವಾದಿಸಿದರು.

ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಬಯಲು?“ಧರ್ಮಸ್ಥಳದ ವಿರುದ್ಧದ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ” ಎಂದು ಸರ್ಕಾರದ ವಕೀಲರು ಹೈಕೋರ್ಟ್ ಮುಂದೆ ಮಾಹಿತಿ ನೀಡಿದರು.

ಚಿನ್ನಯ್ಯನ ಹಿಂದೆ ಇದ್ದ ಬುರುಡೆ ಗ್ಯಾಂಗ್ ಷಡ್ಯಂತ್ರದ ವಿವರಗಳು ಬಯಲಾಗಿದ್ದು, ಮೊದಲು ನೀಡಿದ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ

“2014ರವರೆಗೆ ಚಿನ್ನಯ್ಯ ಧರ್ಮಸ್ಥಳದಲ್ಲಿ ಕಸ ಗುಡಿಸುತ್ತಿದ್ದ. 2 ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಬಂದು ಹೋಗಿದ್ದಾನೆ. ಪಾಪಪ್ರಜ್ಞೆ ಕಾಡುತ್ತಿದೆ ಎಂದು ಹೇಳಿದ್ದ” ಎಂಬ ಮಾಹಿತಿ ಹೈಕೋರ್ಟ್ ಮುಂದೆ ಇಡಲಾಯಿತು.

“ಚಿನ್ನಯ್ಯ ಹೇಳಿದ 13 ಸ್ಥಳಗಳಲ್ಲಿ ಶೋಧ ನಡೆಸಿದಾಗ, ಅಸ್ಥಿಪಂಜರ ಸಿಕ್ಕಿದ್ದು ಒಂದೇ ಸ್ಥಳದಲ್ಲಿ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಿಕ್ಕ ಮೂಳೆಗಳು ಪುರುಷನದ್ದು ಎಂದು ಗೊತ್ತಾಗಿದೆ. ಮತ್ತೊಂದು ಭೂಮಿಯ ಮೇಲ್ಬಾಗದಲ್ಲಿ ಸಿಕ್ಕಿದ್ದು ಅದು ಕೂಡ ಪುರುಷನ ಅಸ್ತಿ ಪಂಜರವಾಗಿದೆ. ದೂರುದಾರ ಚನ್ನಯ್ಯ ತಂದುಕೊಟ್ಟ ತಲೆಬುರುಡೆ ೩೦ ವರ್ಷ ಮೀರಿದ ಪುರುಷನದ್ದು ಎಂದು ತಿಳಿದುಬಂದಿದೆ ಎಂದು ಎಸ್ಪಿಪಿ ಜಗದೀಶ್ ವಾದ ಮಂಡಿಸಿದರು.

“ಈ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮುಂದುವರೆದಿದ್ದು, ಮತ್ತಷ್ಟು ಶೋಧಕ್ಕೆ ಅವಕಾಶ ನೀಡಬಾರದು” ಎಂಬುದು ಸರ್ಕಾರದ ವಾದ ಎಂದರು.

Exit mobile version