Site icon Suddi Belthangady

ಜಾತಿ ಗಣತಿ ಸಮೀಕ್ಷೆಯಲ್ಲಿ 55 ವೈಯಕ್ತಿಕ ವಿವರಗಳನ್ನು ಪಡೆಯಲಿದ್ದು, ಗೌಡ ಸಮಾಜ ಬಾಂಧವರು ಜಾತಿ ಕಲಂನಲ್ಲಿ ಒಕ್ಕಲಿಗ, ಉಪಜಾತಿಯ ಕಲಂನಲ್ಲಿ ಗೌಡ ಎಂದು ನಮೂದಿಸುವಂತೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ: ಹೆಚ್. ಪದ್ಮಗೌಡ- ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಕರ್ನಾಟಕ ಸರಕಾರವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ನಿರ್ಧರಿಸಿದ್ದು ಇದೇ ಸೆ. 22 ರಂದು ಸಮೀಕ್ಷೆ ಆರಂಭಗೊಳ್ಳುವುದು. ಮುಂದಿನ 15 ದಿನಗಳ ತನಕ ಸರಕಾರ ನಿಗದಿ ಪಡಿಸಿದ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡುವ ಕಾರ್ಯಕ್ರಮದ ಬಗ್ಗೆ ಈಗಾಗಲೇ ನಿರ್ಧರಿಸಿದ್ದು, ಸಮಾಜ ಬಾಂಧವರಾದ ತಮ್ಮ ಮನೆಗೆ ಸಮೀಕ್ಷೆಗೆ ಬಂದಾಗ ಅಂದಾಜು ಪ್ರಕಾರ ಸುಮಾರು 55 ವೈಯಕ್ತಿಕ ವಿವರಗಳನ್ನು ನಿಮ್ಮಿಂದ ಪಡೆಯಲಿದ್ದು ಮುಖ್ಯವಾಗಿ ಸಮಾಜ ಬಾಂಧವರಾದ ತಾವುಗಳು ಜಾತಿಯ ಕಾಲಂ ನಲ್ಲಿ ಒಕ್ಕಲಿಗ ಎಂದೂ, ಉಪಜಾತಿಯ ಕಾಲಂ ನಲ್ಲಿ ಗೌಡ ಎಂದೂ ಹಾಗೂ ಮಾತೃಭಾಷೆಯ ಕಾಲಂ ನಲ್ಲಿ ತುಳು ಭಾಷೆ ಮಾತನಾಡುವವರು ತುಳು ಎಂದೂ, ಅರೆ ಭಾಷೆ ಮಾತಾಡುವವರು ಅರೆ ಭಾಷೆ ಎಂದೂ, ಹಾಗೂ ಕನ್ನಡ ಮಾತನಾಡುವವರು ಕನ್ನಡ ಎಂದು ನಮೂದಿಸಬೇಕೆಂದು ತಾಲೂಕು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ ರವರು ತಿಳಿಸಿದ್ದಾರೆ. ಅವರು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸೆ. 17 ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ: 2025ರ ಮಾರ್ಚ್/ಎಪ್ರಿಲ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚಿನ ಮತ್ತು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಬೆಳ್ತಂಗಡಿ ತಾಲೂಕಿನ ಗೌಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅ.12 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳು ವಾಣಿ ಕಾಲೇಜಿನ ಕಛೇರಿಯಿಂದ ಅರ್ಜಿಗಳನ್ನು ಪಡೆದುಕೊಂಡು, ಗ್ರಾಮ ಸಮಿತಿ ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರಿಂದ ದೃಢೀಕರಿಸಿ ದಾಖಲೆಗಳೊಂದಿಗೆ ಆ.04 ರರೊಳಗೆ ವಾಣಿ ಪದವಿ ಪೂರ್ವ ಕಾಲೇಜಿನ ಕಛೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ. ಅಲ್ಲದೆ ಸಾಂಸ್ಕೃತಿಕ/ಆಟೋಟ ಸ್ಪರ್ಧೆಗಳಲ್ಲಿ (ಸರ್ಕಾರಿ ಇಲಾಖೆಗಳ ವತಿಯಿಂದ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರು) ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅ.06 ರ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೋಶಾಧಿಕಾರಿ ಯುವರಾಜ್ ಅನಾರು, ನಿರ್ದೇಶಕರಾದ ವಸಂತ ಗೌಡ, ದಿನೇಶ್ ಗೌಡ, ಡಿ.ಎಂ ಗೌಡ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಣೇಶ್ ಗೌಡ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀನಾಥ್ ಎಂ. ಧನ್ಯವಾದವಿತ್ತರು.

Exit mobile version