ಬೆಳ್ತಂಗಡಿ: ಕರ್ನಾಟಕ ರಾಜಕೇಸರಿ ಸೇವಾ ಟ್ರಸ್ಟ್ ನ ನೂತನ ಲಾಂಛನ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ಅರ್ಚಕ ಬಾಲಚಂದ್ರ ಐತಾಳ್ ಅವರು ನೂತನ ಲಾಂಛನವನ್ನು ಬಿಡುಗಡೆಗೊಳಿಸಿ ಶ್ರೀದೇವಿಯು ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು. ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಸಂಸ್ಥೆಯ ಈವರೆಗಿನ ಸೇವಾ ಕಾರ್ಯ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.
ಬಡ ನಿರ್ಗತಿಕರಿಗೆ ಸೂರು ಒದಗಿಸುವ “ಆಸರೆ ಯೋಜನೆ” ಮತ್ತು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ “ಸ್ವಚ್ಛಾಲಯ ಅಭಿಯಾನ” ಗಳ ಬಗ್ಗೆ ಸಂಸದರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಮುಕ್ತಕಂಠದಿಂದ ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆಯ ಜನಪರ ಕಾರ್ಯ ಯೋಜನೆಗಳಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.
ರಾಜಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ದ.ಕ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಸತೀಶ್ ಕಂಗಿತ್ತಿಲು ಹಾಗೂ ಪದಾಧಿಕಾರಿಗಳಾದ ಗುರುಪ್ರಸಾದ್ ಕುಲಾಲ್, ಲೋಕೇಶ್ ಮಂಗಳಾದೇವಿ, ವರುಣ್ ಕುಮಾರ್ ಬಪ್ಪನಾಡು, ಮನೋಜ್ ಕುಂದರ್, ಪ್ರವೀಣ್ ಕುಲಾಲ್, ಸಂದೀಪ್ ಬೆಳ್ತಂಗಡಿ, ವಿನೋದ್ ಲಾಯಿಲಾ, ಸಂದೇಶ್, ಶರತ್ ಕರಾಯ ಮತ್ತು ಸಂತೋಷ್ ಉಜಿರೆ ಉಪಸ್ಥಿತರಿದ್ದರು.