ಬೆಳ್ತಂಗಡಿ: ಪದ್ಮುಂಜ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ ಅಧ್ಯಕ್ಷತೆಯಲ್ಲಿ ಸೆ.14ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ ಮಾತನಾಡಿ ಸಂಘ ಕಂಪ್ಯೂಟರೀಕರಣಗೊಂಡಿದ್ದು ಎಲ್ಲಾ ಗ್ರಾಹಕರಿಗೆ ಅನುಕೂಲವಾಗಲೆಂದು ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಆರ್.ಟಿ.ಜಿ.ಎಸ್/ನೆಫ್ಟ್ ಸೌಲಭ್ಯವನ್ನು ಕೂಡ ನೀಡುತ್ತಿದೆ. ಸಂಘದಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ ಪ್ರತೀ ಮಂಗಳವಾರ ಅಡಿಕೆ ಖರೀದಿ ಮಾಡಲಾಗುತ್ತಿದೆ.
ಸೇಫ್ ಲಾಕರ್ ಸೌಲಭ್ಯ ಕೂಡಾ ಇದೆ. ಸಂಘಕ್ಕೆ ಸಿ.ಸಿ. ಟಿವಿ, ಸೈರನ್ ಅಳವಡಿಸಲಾಗಿದೆ. ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ.
ನಮ್ಮ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ರೈತ ವಿಧ್ಯಾನಿಧಿ ಯೋಜನೆಯ ಮೂಲಕ ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾದ ಹಾಗೂ ಪಿಯುಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ‘ತೇರ್ಗಡೆಗೊಂಡ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸುತ್ತಿದ್ದೇವೆ.
ಸದಸ್ಯರ ಕೃಷಿಗೆ ಸಿಡಿಲು ಬಡಿತದಿಂದ ಹಾನಿಯಾದಲ್ಲಿ ಪರಿಹಾರ ಧನ ನೀಡುತ್ತಿದ್ದೇವೆ. ಸಂಘದ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಜರಗುವ ಎಲ್ಲಾ ಸಾಮಾಜಿಕ, ಧಾರ್ಮಿಕ, ಕ್ರೀಡೆ ಇನ್ನಿತರ ಸಮಾಜಮುಖಿ ಕಾರ್ಯಕ್ಕೆ ಧನ ಸಹಾಯ ಮಾಡುತ್ತಿದ್ದೇವೆ. ಅಲ್ಲದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಪೈಪು ಮತ್ತು ಅದರ ಬಿಡಿ ಭಾಗಗಳು ಕಾರ್ಯಕ್ಷೇತ್ರದ ಎಲ್ಲಾ ಕೃಷಿಕರಿಗೆ ಸಿಗುವಂತೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ.
ನಮ್ಮ ಸಂಘವು ಲಾಭದಲ್ಲಿ ಇದ್ದು ರೂ.6.11 ಕೋಟಿ ಪಾಲು ಬಂಡವಾಳ, 39.57 ಕೋಟಿ ಠೇವಣಿ ಹೊಂದಿರುತ್ತದೆ.ಸಂಘದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ರೂ.74.84 ಹೊರಹಾಕಿ ಸಾಲವಿದ್ದು, ವಾರ್ಷಿಕ ವ್ಯವಹಾರ 433.23 ಕೋಟಿ ವ್ಯವಹಾರ ನಡೆಸಿ, ರೂ.2.17 ಕೋಟಿ ನಿವ್ವಳ ಲಾಭಗಳಿಸಿರುತ್ತದೆ. ಅಲ್ಲದೆ ಸತತ 33 ವರ್ಷಗಳಿಂದ ಲಾಭಪಡೆಯುತ್ತಿದ್ದು ಲೆಕ್ಕ ಪರಿಶೋಧನೆಯಲ್ಲಿ ‘ಎ’ ಗ್ರೇಡ್ ಪಡೆದಿರುತ್ತದೆ. ಸಂಘದ ಸದಸ್ಯರಿಗೆ 13 ಶೇಕಡಾ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ ಹೇಳಿದರು.
ಸನ್ಮಾನ: ಪದ್ಮುಂಜ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 40 ವರ್ಷದಿಂದ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿ ಮೇ.31 ರಂದು ನಿವೃತ್ತಿಗೊಂಡ ಜಯರಾಮ್ ಶೆಟ್ಟಿ ಆವರನ್ನು ಸನ್ಮಾನಿಸಲಾಯಿತು.
ಪದ್ಮುಂಜದಲ್ಲಿ 37 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿದ ವೆಂಕಟ್ರಮಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಅಶೋಕ್ ಪಿ, ನಿರ್ದೇಶಕರಾದ ಉದಯ್ ಭಟ್ ಕೆ, ನಾರಾಯಣ ಗೌಡ, ಉದಯ ಬಿ.ಕೆ, ಶೀಲಾವತಿ, ಡೀಕಯ್ಯ ಗೌಡ, ದಿನೇಶ್ ನಾಯ್ಕ್, ಪ್ರಭಾಕರ್ ಗೌಡ, ಪ್ರಸಾದ್, ಚಂದನ್ ಕುಮಾರ್ ಎ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ನಿರ್ದೇಶಕಿ ಶಾರದಾ ಆರ್. ರೈ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಬಿ. ವರದಿ ಮಂಡಿಸಿದರು. ನಿರ್ದೇಶಕ ನಾರಾಯಣ ಗೌಡ ಮತ್ತು ಉದಯ್ ಬಿ.ಕೆ. ಸನ್ಮಾನ ಪತ್ರವನ್ನು ವಾಚಿಸಿದರು. ಸಿಬ್ಬಂದಿಗಳಾದ ಚಿದಾನಂದ ಗೌಡ, ವಿಠಲ ನಾಯ್ಕ್, ಜ್ಯೋತಿ, ಮಧುಶ್ರೀ, ಪ್ರೇಕ್ಷಿತ್ ಹೆಚ್.ಯು., ಸ್ಪಂದನ್ ಬಿ., ಪ್ರೀತಮ್ ಸಾಲಿಯಾನ್, ರಾಜವರ್ಮ ಇಂದ್ರ ಸಹಕರಿಸಿದರು. ಸಂಘದ ನಿರ್ದೇಶಕಿ ಶೀಲಾವತಿ ಧನ್ಯವಾದವಿತ್ತರು.