ಮುಂಡಾಜೆ: “ಕಳೆದ ಆರ್ಥಿಕ ವರ್ಷದಲ್ಲಿ ಸಂಘವು 1,439 ಕೋಟಿ ರೂ. ವ್ಯವಹಾರ ನಡೆಸಿದ್ದು 2.39 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ. 16 ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ” ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ್ ತಿಳಿಸಿದರು.
ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಸೆ.13ರಂದು ಜರಗಿದ ಸಂಘದ 105ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು 6,071 ಮಂದಿ ಸದಸ್ಯರನ್ನು ಹೊಂದಿದ್ದು 7.96 ಕೋಟಿ ರೂ ಪಾಲು ಬಂಡವಾಳ ಹೊಂದಿದೆ. 77.23 ಕೋಟಿ ರೂ. ಠೇವಣಿ, ಡಿಸಿಸಿ ಬ್ಯಾಂಕ್ ನ ಸಹಕಾರದೊಂದಿಗೆ 114 ಕೋಟಿ ರೂ.ಸಾಲ ನೀಡಿದ್ದು ವರ್ಷಾಂತ್ಯಕ್ಕೆ ಶೇ. 100 ಸಾಲ ವಸೂಲಾತಿಯಾಗಿರುತ್ತದೆಎಂದು ಹೇಳಿದರು.
“ಸಂಘದ ಸ್ವಂತ ಜಾಗಗಳಲ್ಲಿ ವಾಣಿಜ್ಯ ಸಂಕೀರ್ಣ, ಪೆಟ್ರೋಲ್ ಪಂಪ್ ನಿರ್ಮಾಣ, ಕ ಸಂಘದ ವ್ಯಾಪ್ತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಪೂರ್ಣಾವಧಿ ಶಾಖೆ ಆರಂಭಿಸಲು ಮನವಿ ಸಲ್ಲಿಸುವುದು, ಕೃಷಿಕ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಕ್ರಿಮಿನಾಶಕ ಗೊಬ್ಬರ, ಕೃಷಿ ಉಪಕರಣ ಪೂರೈಕೆ, ವಿಧಾನ ಪರಿಷತ್ತಿಗೆ ಸಹಕಾರಿ ಕ್ಷೇತ್ರದಿಂದ ಓರ್ವ ಎಂ.ಎಲ್.ಸಿ ಬರುವಂತೆ ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ಸರಕಾರಕ್ಕೆ ಒತ್ತಡ ಹೇರುವುದು” ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಿರ್ದೇಶಕರಾದ ವೆಂಕಟೇಶ್ವರ ಭಟ್, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ರವಿ ಪೂಜಾರಿ, ಚೆನ್ನಕೇಶವ ನಾಯ್ಕ, ಅಶ್ವಿನಿ ಎ. ಹೆಬ್ಬಾರ್, ಸುಮಾ ಎಂ. ಗೋಖಲೆ, ಮೋಹಿನಿ, ನಾರಾಯಣ ಫಡ್ಕೆ, ಬಾಬು ಗೌಡ ಹಾಗೂ ಸಿಇಒ ಪ್ರಸನ್ನ ಪರಾಂಜಪೆ ಉಪಸ್ಥಿತರಿದ್ದರು. ಕಕ್ಕಿಂಜೆ ಶಾಖಾ ಪ್ರಬಂಧಕಿ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.