ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಹೊಂದಿರುವ ನಾಡಿನ ಆಧರಣೀಯ ಕ್ಷೇತ್ರ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರಿನ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಸಂಬಂಧಿಸಿದಂತೆ ಸೆ. 9ರಂದು ವಕ್ಫ್ ಅಧಿಕಾರಿಗಳ ಸುಪರ್ದಿಯಲ್ಲಿ ಚುನಾವಣೆ ನಡೆಯಿತು.
ಬೆಳಿಗ್ಗೆ ಮಹಾಸಭೆಯ ಪ್ರಕ್ರೀಯೆ ನಡೆದು ಅಪರಾಹ್ನ ನಂತರ ಚುನಾವಣೆ ನಡೆಯಿತು. ವಕ್ಫ್ ಬೋರ್ಡ್ ನಿಗದಿಗೊಳಿಸಿದ್ದ 11 ಸ್ಥಾನಗಳಿಗೆ 21ಮಂದಿ ಉಮೇದ್ವಾರಿಕೆ ಸಲ್ಲಿಸಿದ್ದರಿಂದ ಪ್ರಜಾಪ್ರಭುತ್ವ ಆಧರಿತವಾಗಿ ಗುಪ್ತ ಮತದಾನದ ಮೂಲಕ ಕ್ರಮವಾಗಿ ಅತೀ ಹೆಚ್ಚು ಮತಗಳನ್ನು ಪಡೆದ 11 ಮಂದಿ ಮುಂದಿನ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಘೋಷಿಸಿದರು.
ಚುನಾವಣೆಯಲ್ಲಿ ಮುಹಮ್ಮದ್ ಬಶೀರ್ ಅಹ್ಸನಿ, ಡಿ.ವೈ. ಉಮರ್, ಅಬ್ದುಲ್ ಸಲೀಂ, ಅಬೂಬಕ್ಕರ್ ಸಿದ್ದೀಕ್ ಜೆ.ಹೆಚ್., ಕೆ.ಯು ಇಬ್ರಾಹಿಂ, ಕೆ.ಯು. ಹನೀಫ್, ಬದ್ರುದ್ದೀನ್ ಹೆಚ್., ಅಬ್ದುಲ್ ಹಕೀಂ ಕೆ.ಕೆ., ಕೆ.ಯು. ಮುಹಮ್ಮದ್ ಸಖಾಫಿ, ಶರೀಫ್ ಸಅದಿ ಮತ್ತು ಯಾಕೂಬ್ ಎನ್.ಎಂ. ನಿರ್ದೇಶಕರುಗಳಾಗಿ ಚುನಾಯಿತರಾದರು.
ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗಿರುವ ಈ 11ನಿರ್ದೇಶಕರ ಮಂಡಳಿ ಮುಂದಿನ ಹಂತದಲ್ಲಿ ಆಡಳಿತ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ದರ್ಗಾ ಶರೀಫ್ ಕಾಜೂರು ಆಡಳಿತವನ್ನು ಮುನ್ನಡೆಸಲಿದ್ದಾರೆ. ಮಹಾಸಭೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಸಯ್ಯಿದ್ ಕಾಜೂರು ತಂಙಳ್, ವಕ್ಫ್ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು. ಮುಂಜಾಗ್ರತಾ ಕ್ರಮವಾಗಿ ಮೀಸಲು ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಮಹಾಸಭೆಯಲ್ಲಿ ಹಿಂದಿನ ಮೂರು ವರುಷಗಳ ಲೆಕ್ಕ ಪತ್ರ ಹಾಗೂ ತ್ರೈ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್ ಮಂಡಿಸಿದರು. ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಕೆ ಯು ಇಬ್ರಾಹಿಂ ಸ್ವಾಗತಿಸಿದರು.

