ಉಜಿರೆ: “ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಕಠಿಣ ಪರಿಶ್ರಮ, ಬುದ್ದವಂತಿಕೆಯಿಂದ ಕೆಲಸ ನಿರ್ವಹಿಸುವುದು ಈ ಎರಡು ವಿಷಯ ಅತ್ಯಗತ್ಯ. ಜೀವನ ಕಟ್ಟಿಕೊಳ್ಳುವ ಅವಕಾಶ ಮಾಡಿಕೊಟ್ಟ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವ ನಿಮ್ಮ ಶಿಕ್ಷಣ ಸಂಸ್ಥೆಯನ್ನು ಯಾವತ್ತೂ ಮರೆಯಬಾರದು. ಎಂದು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಅವರು ಸೆ.10ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಕಾಲೇಜಿನಲ್ಲಿ 2025ರ ಜುಲೈ ತಿಂಗಳಿನಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಅವರು ಮನುಷ್ಯನ ವ್ಯಕ್ತಿತ್ವ ಅವನ ಗುಣಧರ್ಮವನ್ನು ಅವಲಂಬಿಸಿದೆ ಎನ್ನುವ ಪೂಜ್ಯರ ಮಾತು ಯಾವತ್ತೂ ಮರೆಯಬಾರದು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಅದೇ ರೀತಿ ಬಣ್ಣ ಬಣ್ಣದ ಲೋಕದಲ್ಲಿ ಕ್ಷಣಿಕ ಆಸೆಗಾಗಿ ನಮ್ಮ ಅಮೂಲ್ಯ ವ್ಯಕ್ತಿತ್ವ ಬಲಿ ಕೊಡಬಾರದು. ಇನ್ಫೋಸಿಸ್ ಅಧ್ಯಕ್ಷೆ ಸುದಾಮೂರ್ತಿ ಅವರು ಹೇಳುವಂತೆ ಆತ್ಮಸ್ಥೈರ್ಯ ಎಲ್ಲಾ ಒಡವೆಗಳಿಗಿಂತ ಶ್ರೇಷ್ಠ ಒಡವೆ. ಯಾವುದೇ ಆದರ್ಶ ವ್ಯಕ್ತಿಯ ಜೀವನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕಷ್ಟ ಪಟ್ಟು ಮಾಡಿದ ಸಾಧನೆ ಶಾಶ್ವತವಾಗಿರುತ್ತದೆ. ಜೀವನದಲ್ಲಿ ಯಾವುದೇ ಆಮಿಷ, ಹೊಗಳಿಕೆ, ತೆಗಳಿಕೆಗೆ ಕಿವಿ ಕೊಡಬೇಡಿ ಎಂದು ಅವರು ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್ ಅವರು ಮಾತನಾಡಿ, “ಉತ್ತಮ ರೀತಿಯಲ್ಲಿ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಉತ್ತಮ ಹೆಸರು ಪಡೆಯಿರಿ. ಸ್ವ ಉದ್ಯೋಗ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ” ಎಂದರು.
ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ವಿತರಿಸಲಾಯಿತು. 2024-25 ರ ಸಾಲಿನಲ್ಲಿ ಕಂಪ್ಯೂಟರ್ ವೃತ್ತಿ ಮತ್ತು ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ ವೃತ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲಾಯಿತು. ಜೊತೆಗೆ ವೃತ್ತಿ ಥಿಯರಿ ಹಾಗೂ ಉದ್ಯೋಗ ಕೌಶಲ್ಯ ವಿಷಯದಲ್ಲಿ ಶೇ. 100 ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಮಂಗಲಾ ಧನ್ಯವಾದ ನೀಡಿದರು.