ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಮುಂಜಾನೆ ವಾಲಿಬಾಲ್ ಪಂದ್ಯಾಟ, ಲಗೋರಿ, ಹಗ್ಗ ಜಗ್ಗಾಟ ಹಾಗೂ ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ದೀಪ ಪ್ರಜ್ವಲನೆ ಮಾಡಿದ ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಅವರು ಮಾತನಾಡುತ್ತಾ ಇಂದಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧ ಪರಸ್ಪರ ಸಂವಹನದೊಂದಿಗೆ ಜೀವನದುದ್ದಕ್ಕೂ ನೆನೆಯುವಂತೆ ಇರಬೇಕು ಎಂದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಅಸಿಸ್ಟೆಂಟ್ ಮ್ಯಾನೇಜರ್ ಚೈತನ್ಯ ಕೆ.ಎಸ್., ಸೃಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ವರ್ಗದವರ ಪರವಾಗಿ ಮಾತನಾಡಿದ ಕಿರಿಯ ತರಬೇತಿ ಅಧಿಕಾರಿ ರತ್ನಾಕರ ರಾವ್ ಅವರು ವಿದ್ಯಾರ್ಥಿಗಳು ಪಾಠ ಕಲಿಯುವುದರ ಜೊತೆಗೆ ಸಾಮಾಜಿಕ ಬದ್ಧತೆ, ಪರೋಪಕಾರ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು. ಕಿರಿಯ ತರಬೇತಿ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳ ಪರವಾಗಿ ಟರ್ನರ್ ವಿಭಾಗದ ಪ್ರಜ್ಞೇಶ್ ತನ್ನ ಅನುಭವ ವ್ಯಕ್ತಪಡಿಸಿದರು. ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಜ್ಯೋತ್ಸ್ನ್ ಅವರು ಇತ್ತೀಚಿನ ಸೆಮಿಸ್ಟರ್ ಫಲಿತಾಂಶದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಸಂಸ್ಥೆಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನದ ಪಟ್ಟಿಯನ್ನು ಎಲೆಕ್ಟ್ರಿಷಿಯನ್ ವಿಭಾಗದ ವಿದ್ಯಾರ್ಥಿ ರಕ್ಷಿತ್ ಗೌಡ ವಾಚಿಸಿದರು. ಶಾಲಾ ನಾಯಕರಾದ ಎಲೆಕ್ಟ್ರಿಷಿಯನ್ ವಿಭಾಗದ ಪ್ರದೀಪ್ ಹಾಗೂ ಎಂ.ಆರ್.ಎ.ಸಿ. ವಿಭಾಗದ ಸೂರಜ್ ಕಿಣಿ ಆಟೋಟ ಸ್ಪರ್ಧೆಯ ಮುಂದಾಳತ್ವ ವಹಿಸಿದ್ದರು. ವಿದ್ಯಾರ್ಥಿ ಕಾರ್ತಿಕ್ ಪ್ರಾರ್ಥಿಸಿ, ಪ್ರಭಾ ಸ್ವಾಗತಿಸಿದರು. ಸಂಸ್ಥೆಯ ಹಿತೈಷಿ ಜಗನ್ನಾಥ ದೇವಾಡಿಗ ನಿರೂಪಿಸಿದರು. ಪೂಜ ಧನ್ಯವಾದ ಸಮರ್ಪಿಸಿದರು.