ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ. 5ರಂದು ದಯಾ ವಿಶೇಷ ಶಾಲೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಸಹ ಗುರು ಫಾ. ಲ್ಯಾರಿ ಪಿಂಟೋ ಅವರ ಉಪಸ್ಥಿತಿಯಲ್ಲಿ ದಯಾ ವಿಶೇಷ ಶಿಕ್ಷಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡು, ಸಂವಿಧಾನ ಪುಸ್ತಕಕ್ಕೆ ಹಾಗೂ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಹೂವಿನ ಮಾಲಾರ್ಪಣೆಯನ್ನು ಮಾಡಿ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ, ಉಪಸ್ಥಿತರಿದ್ದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಕೋರಿದ ಫಾ. ಲ್ಯಾರಿ ಪಿಂಟೋ ಮಾತನಾಡಿ, ಒಬ್ಬ ಶಿಕ್ಷಕಿಯು ಮಗುವಿನ ತಾಯಿಯಿದ್ದಂತೆ. ತಾಯಿ ತನ್ನ ಮಕ್ಕಳಲ್ಲಿ ಭೇದ ಭಾವವನ್ನು ತೋರದೆ, ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ, ಎಲ್ಲರ ಅಗತ್ಯತೆಯನ್ನು ಗಮನಿಸಿ ಎಲ್ಲಾ ಮಕ್ಕಳನ್ನು ಸಮಾನವಾಗಿ ಪ್ರೀತಿಸುತ್ತಾಳೆ. ಅದರಂತೆಯೇ ಶಿಕ್ಷಕರಾದವರೂ ಕೂಡ ಎಲ್ಲಾ ಮಕ್ಕಳನ್ನೂ ಸಮಾನವಾಗಿ ಕಾಣುವ ಮತ್ತು ಪ್ರೀತಿಸುವ ಜವಾಬ್ದಾರಿಯನ್ನು ಹೊರುವವರಾಗಿದ್ದಾರೆ. ಮಕ್ಕಳ ಅಗತ್ಯತೆಯನ್ನು ಮನಗಂಡು ಎಲ್ಲಾ ಮಕ್ಕಳನ್ನು ಸಮಾಜದಲ್ಲಿ ತಲೆ ಎತ್ತಿ ಬದುಕಲು ಕಲಿಸುವ ಶಿಕ್ಷಕರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ ಅದರಲ್ಲೂ ಇಂತಹ ವಿಶೇಷ ಶಾಲೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಎಲ್ಲಾ ಶಿಕ್ಷಕರನ್ನು ಅವರು ನೀಡುತ್ತಿರುವ ನಿಸ್ವಾರ್ಥ ಸೇವೆಗಾಗಿ ಶ್ಲಾಘಿಸಿ ಎಲ್ಲರಿಗೂ ಶುಭವನ್ನು ಹಾರೈಸಿದರು.
ನಂತರ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಫಾ.ವಿನೋದ್ ಮಸ್ಕರೇನಸ್ ರವರು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವ ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಕೋರಿದರು.
ಶಿಕ್ಷಕರು ತಮ್ಮ ಉತ್ತಮ ನಡೆ ನುಡಿಗಳಿಂದ ಹೇಗೆ ತಮ್ಮ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಹುದು ಎಂಬುದರ ಬಗ್ಗೆ ತಿಳಿಸಿ, ಇಂತಹ ವಿಶೇಷ ಶಾಲೆಯಲ್ಲಿ ಶಿಕ್ಷಕರು ವಿಶೇಷ ರೀತಿಯಲ್ಲಿ ಮಕ್ಕಳ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ.
ಉಳಿದ ಸಾಮಾನ್ಯ ಮಕ್ಕಳಂತೆ ಈ ಮಕ್ಕಳು ನಮ್ಮ ನಿರೀಕ್ಷೆಯ ಮಟ್ಟಕ್ಕೆ ಬೆಳೆಯದೇ ಇರಬಹುದು. ಆದರೂ ಅವರು ಶಿಕ್ಷಕರ ಸಹಾಯದಿಂದ ಹಲವಾರು ಸಣ್ಣಪುಟ್ಟ ವಿಚಾರಗಳನ್ನು ತಿಳಿದು, ಕಲಿತು ಮುಂದೊಂದು ದಿನ ತಮ್ಮ ಜೀವನವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರೆ ಶಿಕ್ಷಕರಾಗಿ ನಿಮ್ಮ ಜೀವನ ನಿಜಕ್ಕೂ ಸಾರ್ಥಕ.
ಮಕ್ಕಳ ಮತ್ತು ಶಾಲೆಯ ಏಳಿಗೆಯಲ್ಲಿ ಶ್ರಮಿಸುತ್ತಿರುವ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ಮಕ್ಕಳು, ತಮ್ಮ ಶಿಕ್ಷಕರ ಪರಿಶ್ರಮವನ್ನು ಪ್ರತಿಬಿಂಬಿಸುವ ವಿವಿಧ ಹಾಡು, ನೃತ್ಯ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶಿಕ್ಷಕರಿಗಾಗಿ ಹಲವು ಆಟಗಳನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರ ಪ್ರತಿನಿಧಿಯಾಗಿ ವಿಶೇಷ ಶಿಕ್ಷಕಿ ಸುಜಾತಾ, ಮಕ್ಕಳ ಪ್ರತಿನಿಧಿಯಾಗಿ ರಕ್ಷಾ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಮೆರಿನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿ.ಕೆ.ಎಸ್.ಕೆ ಸಿಬ್ಬಂದಿಗಳು, ದಯಾ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿಶೇಷ ಮಕ್ಕಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಾದ ಮಹಮ್ಮದ್ ಅಝಾಮ್ ಸರ್ವರನ್ನು ಸ್ವಾಗತಿಸಿ, ವಿದ್ಯಾರ್ಥಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ರೆನ್ಸನ್ ವಂದಿಸಿ,