Site icon Suddi Belthangady

ಜಿ.ಎಸ್.ಟಿ ಕಡಿತ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದಿಂದ ಸ್ವಾಗತ

ಬೆಳ್ತಂಗಡಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ಜಾರಿಗೆ ತಂದಿರುವ ಬದಲಾವಣೆಗಳು ಮತ್ತು ತೆರಿಗೆ ಇಳಿಕೆ ಪ್ರಸ್ತಾಪಗಳು ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಲಿವೆ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ (ಕೆಎಸ್ಎಚ್‌ಎ) ಅಧ್ಯಕ್ಷ ಜಿ. ಕೆ. ಶೆಟ್ಟಿ ಮತ್ತು ಗೌರವ ಕಾರ್ಯದರ್ಶಿ ಎಂ.ವಿ. ರಾಘವೇಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರಕಾರ, ಜಿಎಸ್‌ಟಿ ಕೌನ್ಸಿಲ್ ಈಡೇರಿಸಿದೆ ಎಂದು ಅವರು ತಿಳಿಸಿದ್ದಾರೆ.

ಅಣಬೆ, ಐಸ್ ಕ್ರೀಮ್, ಚಾಕೊಲೇಟ್ಸ್, ಬ್ರೆಡ್, ಪರೋಟ, ತರಕಾರಿ, ಹಣ್ಣು, ಧಾನ್ಯದಿಂದ ತಯಾರಿಸಿರುವ ವಸ್ತುಗಳು, ಹೀಗೆ ದಿನ ನಿತ್ಯ ಹೋಟೆಲ್ ಉದ್ಯಮಗಳಲ್ಲಿ ಬಳಕೆಯಾಗುವ ವಸ್ತುಗಳ ತೆರಿಗೆ ಹೊರೆಯನ್ನು ಇಳಿಸಲಾಗಿದೆ. ಇದರ ಜೊತೆಗೆ 7,500 ರೂಪಾಯಿವರೆಗಿನ ಹೋಟೆಲ್ ರೂಮ್‌ಗಳ ಮೇಲಿನ ತೆರಿಗೆಯನ್ನು 12%ದಿಂದ 5% ಇಳಿಸಲಾಗಿದೆ.

ಇವೆಲ್ಲವೂ ಹೋಟೆಲ್ ಹಾಗು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಇಂಬು ನೀಡಲಿದೆ ಎಂದು ಅವರು ತಿಳಿಸಿದ್ದಾರೆ. “ಜಿಎಸ್‌ಟಿ ಇಳಿಕೆ ನಿರ್ಧಾರ ತೆಗೆದುಕೊಂಡ ಜಿ.ಎಸ್.ಟಿ ಕೌನ್ಸಿಲ್, ಪ್ರಧಾನಿ ನರೇಂದ್ರ ಮೋದಿ, ಹಾಗು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವೈಯಕ್ತಿಕವಾಗಿ ಹಾಗೂ ಸಂಘ ಪರವಾಗಿ ಅಭಿನಂದಿಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.

“ಈ ಬೇಡಿಕೆಗಳ ಈಡೇರಿಕೆಗೆ ಸಂಘ ನಿರಂತರವಾಗಿ ನಡೆಸಿದ ಪ್ರಯತ್ನ ಫಲ ನೀಡಿದೆ” ಎಂದು ಅವರು ತಿಳಿಸಿದ್ದಾರೆ. “ಸಂಘದ ಇನ್ನೊಂದು ಬಹುಮುಖ್ಯ ಕೋರಿಕೆ ಎಂದರೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಟೆಲುಗಳು ಹಾಗು ರೆಸ್ಟೋರೆಂಟುಗಳು ಬಾಡಿಗೆ ಮೇಲೆ 18% ಜಿ ಎಸ್ ಟಿ ಪಾವತಿಸುತ್ತಿವೆ. ಅದನ್ನು ಕೂಡಾ ಕೇಂದ್ರ ಸರಕಾರ-ಜಿಎಸ್‌ಟಿ ಕೌನ್ಸಿಲ್ ಕಡಿಮೆ ಮಾಡಬೇಕು,” ಎಂದು ಅವರು ಕೋರಿದ್ದಾರೆ.

Exit mobile version