Site icon Suddi Belthangady

ಸವ್ಯಸಾಚಿ – 2025’ ಅಂತರ ಕಾಲೇಜು ವಾಣಿಜ್ಯ ಉತ್ಸವ

ಬೆಳ್ತಂಗಡಿ: ಶಿಕ್ಷಣಕ್ಕೆ ಕೌಶಲ್ಯ ಮತ್ತು ಅನುಭವಗಳ ಬೆಂಬಲ ದೊರೆತಾಗ ಮಾತ್ರ ವಿದ್ಯಾರ್ಥಿ ಸಮಗ್ರ ವ್ಯಕ್ತಿತ್ವ ಹೊಂದಿದ ನಾಗರಿಕನಾಗಿ ರೂಪುಗೊಳ್ಳುತ್ತಾನೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕೇಂಬಿಯಮ್ ಸಂಸ್ಥೆಯ  ಸಹಾಯಕ ಹಣಕಾಸು ವ್ಯವಸ್ಥಾಪಕಿ ಸಿಎ ಕಿರಣಾ ಕಾಮತ್ ನುಡಿದರು.

ಆಳ್ವಾಸ್ ಕಾಲೇಜಿನ ಬಿ.ಕಾಂ ವಿಭಾಗ  ಆಯೋಜಿಸಿದ್ದ ‘ಸವ್ಯಸಾಚಿ – 2025’ ಅಂತರ ಕಾಲೇಜು ವಾಣಿಜ್ಯ ಉತ್ಸವವನ್ನು ಗುರುವಾರ ಕುವೆಂಪು ಸಭಾಂಗಣದಲ್ಲಿ  ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಮಾಜದ ಪ್ರಗತಿಗೆ ಬುನಾದಿ. ಆದರೆ ಕೇವಲ ಅಂಕಗಳು ಅಥವಾ ಪದವಿಗಳು ಸಾಕಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಕೌಶಲ್ಯಗಳ ಬೆಂಬಲ ಸಿಕ್ಕಾಗ ಮಾತ್ರ ವ್ಯಕ್ತಿ ಜನಸಮೂಹದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು  ಆಯೋಜಿಸುವ ಸಂದರ್ಭದಲ್ಲಿ ಆಯೋಜಿಸುವ ಕಾಲೇಜಿನ  ವಿದ್ಯಾರ್ಥಿಗಳು ಆತ್ಮವಿಶ್ವಾಸ, ಸಂವಹನ ಕೌಶಲ ಹೊಣೆಗಾರಿಕೆ, ಶಿಸ್ತಿನ ಪಾಲನೆ, ಸಮಯ ನಿರ್ವಹಣೆ ಮತ್ತು ತುರ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಕಲಿಯುತ್ತಾರೆ.

ಜೊತೆಗೆ, ಇತರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡುವುದರಿಂದ ಸ್ನೇಹ, ಸಹಕಾರ ಹಾಗೂ ಹೊಸ ವಿಚಾರಗಳ ವಿನಿಮಯ ಸಾಧ್ಯವಾಗುತ್ತದೆ. ಕಾಲೇಜನ್ನು ಪ್ರತಿನಿಧಿಸುವ ಹೊಣೆಗಾರಿಕೆ ಬಂದಾಗ ಅದು ಸ್ವಾಭಾವಿಕವಾಗಿ ಶ್ರೇಷ್ಠತೆಯನ್ನು ತರುವಂತೆ ಪ್ರೇರೆಪಿಸುತ್ತದೆ. ತಮ್ಮ ಕೌಶಲ್ಯವನ್ನು ತೋರಿಸಲು ವೇದಿಕೆ ದೊರೆಯುವುದಲ್ಲದೆ, ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ, ಆತಿಥೇಯ ಕಾಲೇಜಿನ ಶಿಸ್ತು, ನಿರ್ವಹಣೆ ಹಾಗೂ ಆತಿಥ್ಯ ಅನುಭವಿಸುವುದರಿಂದ ಭವಿಷ್ಯದ ಜೀವನದಲ್ಲಿಯೂ ಉತ್ತಮ ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು, ತಮಗೆ ತಾವೇ ನಿರಂತರ ಮೌಲ್ಯಮಾಪನ ಮಾಡಿಕೊಂಡು ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಎಂದು ಸಲಹೆ ನೀಡಿದರು.

ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್ ಮಾತನಾಡಿ, ಆಳ್ವಾಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ವಿದ್ಯಾರ್ಥಿಗಳು ಅವಕಾಶ ಲಭಿಸಿದಾಗ ಬಳಸಿಕೊಳ್ಳುಬೇಕು. ಕೆಲವೊಮ್ಮೆ ವಿಫಲರಾಗಬಹುದು.  ಯಶಸ್ಸಿನ ದಾರಿಯಲ್ಲಿ ಅಡೆತಡೆಗಳು, ವಿಫಲತೆಗಳು ಸಹಜ.  ಸೋಲನ್ನು ಕಂಡು ಹಲವರು ನಿರಾಶರಾಗುತ್ತಾರೆ. ಆದರೆ ವಿಫಲತೆ ತಾತ್ಕಾಲಿಕ ಅಡ್ಡಿ ಮಾತ್ರ. ಪ್ರತಿ ತಪ್ಪು ನಮ್ಮ ಮುಂದಿನ ನಡೆಗೆ ಪ್ರೇರಣೆಯಾಗುತ್ತದೆ ಎಂದರು.

‘ಸವ್ಯಸಾಚಿ – 2025’ ಅಂತರ ಕಾಲೇಜು ವಾಣಿಜ್ಯ ಉತ್ಸವದಲ್ಲಿ ನಿಟ್ಟೆ ಪದವಿಪೂರ್ವ ಕಾಲೇಜು ಸಮಗ್ರ ಚಾಂಪಿಯನ್ಸ್ ಪ್ರಶಸ್ತಿ ಪಡೆದರೆ, ಸಂತ ಅಲೋಷಿಯಸ್ ಪ.ಪೂ ಕಾಲೇಜು ರನ್ರ‍್ಸ್ ಅಪ್ ಪ್ರಶಸ್ತಿ ಪಡೆಯಿತು.   ವಿವಿಧ  ಕಾಲೇಜುಗಳಿಂದ 130 ವಿದ್ಯಾರ್ಥಿಗಳು ಕರ‍್ಯಕ್ರಮದಲ್ಲಿ ಪಾಲ್ಗೊಂಡರು. ಕಾರ‍್ಯಕ್ರಮದಲ್ಲಿ  ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್,  ಕರ‍್ಯಕ್ರಮದ ಸಂಯೋಜಕರಾದ ರಮಾನಂದ ನಾಯಕ್, ಪೂಜಾ ಕೋಟ್ಯಾನ್ ಇದ್ದರು. ಪ್ರೀಶಲ್ ಡಿ ಆಲ್ಮೇಡಾ ಸ್ವಾಗತಿಸಿ, ನಿಯತಿ  ಕೋಟ್ಯಾನ್ ನಿರೂಪಿಸಿ, ಚೇತನಾ ಅತಿಥಿಯನ್ನು ಪರಿಚಯಿಸಿ, ಶ್ರೀಮಾ ದೇವಾಡಿಗ ವಂದಿಸಿದರು.  

Exit mobile version