ಬೆಳ್ತಂಗಡಿ: ವೃತ್ತಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ಮಾಡಿರುವ ಸಾಧನೆಯನ್ನು ಪುರಸ್ಕರಿಸಿ ಶಿಕ್ಷಕರಿಗೆ,ಶಿಕ್ಷಕರ ದಿನಾಚರಣೆಯಂದು ನೀಡಲಾಗುವ 2025-26ನೇ ಸಾಲಿನ ‘ಉತ್ತಮ ಶಿಕ್ಷಕ’ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪ್ರಕಟಿಸಲಾಗಿದ್ದು ಪುತ್ತೂರು, ಕಡಬದ ನಾಲ್ವರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯ ಪ್ರಶಸ್ತಿಗೆ ಕಡಬ ತಾಲೂಕಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಶಸ್ತಿಗೆ ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಪಿಎಂಶ್ರೀ ಶಾಲೆ ವೀರಮಂಗಲದ ಮುಖ್ಯಶಿಕ್ಷಕ ತಾರಾನಾಥ ಸವಣೂರು, ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸವಣೂರು ಸಮೀಪದ ಆರೇಶ್‌ಡಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದು ಪ್ರಸ್ತುತ ಬೆಳಂದೂರು ಅಮೈ ಶಾಲೆಯಲ್ಲಿ ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಗನ್ನಾಥ ಶೆಟ್ಟಿ ಪುಂಡಿಕಾಯಿ, ಶಾಂತಿಗೋಡು ಆಯ್ಕೆಯಾಗಿದ್ದಾರೆ. ಸುಳ್ಯ ತಾಲೂಕಿನ ಎಣ್ಣೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಕುಂತೂರು ನಿವಾಸಿ ಮೋಹನ ಎ.ಅವರೂ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪ್ರಶಸ್ತಿಗೆ ಒಟ್ಟು 20 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಲಯದಿಂದ ತಲಾ ಓರ್ವ ಶಿಕ್ಷಕರನ್ನು ಜಿಲ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗವಾಗಿ ವಿಂಗಡಿಸಿ ಪ್ರತಿವಲಯದಿಂದ ಓರ್ವ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಪ್ರೌಢಶಾಲೆ ವಿಭಾಗದಲ್ಲಿ ಪುತ್ತೂರು ವಲಯದಿಂದ ಯಾವುದೇ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿಲ್ಲ, ಪುತ್ತೂರು ವಲಯದಿಂದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಸಂತ ಮೂಲ್ಯರವರ ಹೆಸರನ್ನು ಜಿಲ್ಲಾ ಪ್ರಶಸ್ತಿಗೆ ತಾಲೂಕಿನಿಂದ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು ಎನ್ನಲಾಗಿದೆ.
ಶಿಕ್ಷಕರ ದಿನಾಚರಣೆ ದಿನವಾದಸೆ.5ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರುನಲ್ಲಿ ನಡೆಯಲಿದೆ. ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭಬೆಳ್ತಂಗಡಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ನಡೆಯಲಿದೆ.