ಬೆಳ್ತಂಗಡಿ: ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣದ ತನಿಖೆಯನ್ನ NIA ಗೆ ವಹಿಸುವಂತೆ ಆಗ್ರಹಿಸಿ ಸ್ವಾಮೀಜಿಗಳ ನಿಯೋಗ ಸೆ.4ರಂದು ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದೆ.
ಮಂಗಳೂರಿನ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗಳ ನಿಯೋಗ ಗೃಹ ಸಚಿವ ಅಮಿತ್ ಶಾರವರ ದೆಹಲಿ ಕಚೇರಿಯಲ್ಲಿ ಭೇಟಿ ಮಾಡಿ, ಧರ್ಮಸ್ಥಳ ಪ್ರಕರಣ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದೆ. ಸುಮಾರು ಒಂದು ಗಂಟೆಗಳ ಕಾಲ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ಮಾಹಿತಿ ನೀಡಿ, ಪ್ರಕರಣವನ್ನ ಅತೀ ಶೀಘ್ರ ಎನ್.ಐ.ಎ ತನಿಖೆಗೆ ವಹಿಸಲು ಮನವಿ ಮಾಡಿಕೊಂಡಿದೆ.
ನಿಯೋಗದಲ್ಲಿ ಮಂಗಳೂರು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತು ರಾಜ್ಯದ ನಾನಾ ಭಾಗದ ಪೀಠಾಧಿಪತಿಗಳಾದ ಭಗೀರಥ ಗುರುಪೀಠದ ಜಗದ್ಗುರು ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು, ಶ್ರೀ ಸಿದ್ದರಾಮೇಶ್ವರ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ವರೂರು ಸಂಸ್ಥಾನದ ಜಗದ್ಗುರು ಧರ್ಮಸೇನಾ ಭಟ್ಟಾರಾಕ ಮಹಾಸ್ವಾಮಿಗಳು, ಜಗದ್ಗುರು ಆತ್ಮಾನಂದ ಮಹಾಸ್ವಾಮಿಗಳು, ಮಹದೇಶ್ವರ ಬೆಟ್ಟದ ಸಾಲೂರು ಮಠದ ಜಗದ್ಗುರು ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ರಾಜಸ್ಥಾನದ ಸೌರಭಾಸೇನಾ ಭಟ್ಟಾರಕ ಮಹಾರಾಜ್ ಸ್ವಾಮಿಗಳು ಜೊತೆಗಿದ್ದರು.