Site icon Suddi Belthangady

ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ಕಂಪ್ಯೂಟರ್ ಕೋರ್ಸ್ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಡಿ.ಎಸ್.ಎ., ಡಿ. ಎಫ್.ಎ ಮುಂತಾದ ವಿಷಯಗಳಲ್ಲಿ ಕಂಪ್ಯೂಟರ್ ಶಿಕ್ಷಣದ ತರಗತಿಗಳನ್ನು ಸೆ.1ರಂದು ಉದ್ಘಾಟನೆ ಮಾಡಲಾಯಿತು.
ಉಜಿರೆ ಐಕಾನ್ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜುಕೇಶನ್ ಇದರ ಮಾಲಕ ಸಂತೋಷ್ ಕಂಪ್ಯೂಟರ್ ಶಿಕ್ಷಣ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿ, ‘ ಮುಂದುವರಿಯುತ್ತಿರುವ ದೇಶದಲ್ಲಿ ನಮ್ಮನ್ನು ನಾವು ವೇಗವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಇದೆ. ನಮ್ಮಲ್ಲಿ ಕೌಶಲ್ಯತೆ ಹೆಚ್ಚಾದ ಹಾಗೆ ಅವಕಾಶಗಳು ಹೆಚ್ಚಾಗುತ್ತಾ ಹೋಗುತ್ತದೆ. ಇಂದು ಕಂಪ್ಯೂಟರ್ ಜ್ಞಾನ ಇಲ್ಲದ ವಿದ್ಯಾರ್ಥಿಗಳ ಬದುಕು ಪೂರ್ಣ ಶಿಕ್ಷಣ ಎನಿಸದು. ಹಾಗಾಗಿ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಣ ಆರಂಭವಾಗಿರುವುದು ಶಿಕ್ಷಣದ ಅವಧಿಯಲ್ಲಿಯೇ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋರ್ಸು ಮುಗಿಸಿಕೊಳ್ಳಲು ದೊರೆತ ಸುವರ್ಣ ಅವಕಾಶವಾಗಿದೆ ಉಪಯುಕ್ತವಾಗಿದೆ’ ಎಂದರು.

ಕಾಲೇಜಿನ ಅಡಳಿತ ಮಂಡಳಿ ಅಧ್ಯಕ್ಷೆ ಪ್ರೀತಿತಾ ಧರ್ಮ ವಿಜೇತ್ ಮಾತನಾಡಿ, ‘ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಅನೇಕ ಹೊಸ ವಿಚಾರಗಳನ್ನು ಕಾಲೇಜಿನೊಳಗೆ ಆರಂಭಿಸಿಕೊಂಡಿದ್ದೇವೆ. ವಿದ್ಯಾರ್ಥಿಗಳ ಸಮಯ ವ್ಯರ್ಥವಾಗಬಾರದು. ಹಾಗಾಗಿ ಕಾಲೇಜಿನೊಳಗಿನ ಅವಕಾಶಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವ ಮನಸ್ಸು ಮಾಡಬೇಕು’ ಎಂದರು.

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಚಂದನಾ ಇದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಶುಭಲಕ್ಷ್ಮಿ ವಂದಿಸಿದರು.

Exit mobile version