ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ರಚಿಸಿರುವ ಎಸ್‌ಐಟಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಹೀಗಿದ್ದಾಗ ಶಾಸಕ ಹರೀಶ್ ಪೂಂಜ ಮತ್ತು ಅವರ ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಮೂಲಕ ಕುತಂತ್ರ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಕಿಡಿಕಾರಿದ್ದಾರೆ. ವಿಚಾರ ಆಧಾರಿತವಾಗಿ ಬೆಳ್ತಂಗಡಿ ಬಿಜೆಪಿ ದಿವಾಳಿಯಾಗಿದೆ.
ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆ ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಸಹಿಸಲಾಗದೆ, ಸುಳ್ಳು ಸುದ್ದಿಗಳನ್ನು ಹಬ್ಬಿ ಸಾರ್ವಜನಿಕರನ್ನು ಗೊಂದಲಕ್ಕೆ ತಳ್ಳುವ ಪ್ರಯತ್ನ ಪಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಿತ್ ಶಿವರಾಂ, ಈ ಬಗ್ಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ತಾಲೂಕಿನ ಜನ ಪ್ರಜ್ಞಾವಂತರು. ಸುಳ್ಳು ಸುದ್ದಿಯನ್ನು ಹರಡುವ ಬೆಳ್ತಂಗಡಿಯ ಬಿಜೆಪಿಗೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.