Site icon Suddi Belthangady

ಕನ್ಯಾಡಿ: ಶ್ರೀ ಮಹಾಭಾರತ ಸರಣಿ ತಾಳಮದ್ದಳೆಯ ಉದ್ಘಾಟನೆ ಮತ್ತು ನುಡಿ ನಮನ ಕಾರ್ಯಕ್ರಮ

ಕನ್ಯಾಡಿ: ಉಪ್ಪಿನಂಗಡಿ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಸುವರ್ಣ ಮಹೋತ್ಸವದ ನಿಮಿತ್ತ ನಡೆಸುತ್ತಿರುವ ಜಿಲ್ಲಾ ಮಟ್ಟದ ಯಕ್ಷಗಾನ ತಂಡಗಳ ಶ್ರೀ ಮಹಾಭಾರತ ಸರಣಿಯ ಸ್ವರ್ಣ ಶತಕ ತಾಳಮದ್ದಳೆ ಕಾರ್ಯಕ್ರಮದ ಉದ್ಘಾಟನೆಯು ಕನ್ಯಾಡಿಯ ಶ್ರೀ ಹರಿಹರಾನುಗ್ರಹ ಸಭಾಭವನದಲ್ಲಿ ಜರಗಿತು. ಧರ್ಮಸ್ಥಳ ಕ್ಷೇತ್ರದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕನ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ವಹಿಸಿದ್ದರು. ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಕಾಳಿಕಾಂಬ ಯಕ್ಷಗಾನ ಟ್ರಸ್ಟ್ ಹಮ್ಮಿಕೊಂಡಿರುವ ಸ್ವರ್ಣ ಮಹೋತ್ಸವದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ತಿಳಿಸಿದರು.

ಯಕ್ಷ ಭಾರತಿಯಿಂದ ನುಡಿ ನಮನ ಕಾರ್ಯಕ್ರಮ: ಇತ್ತೀಚೆಗೆ ನಿಧನರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದ, ನಾಟ್ಯ ಗುರು ನರೇಂದ್ರ ಕುಮಾರ ಧರ್ಮಸ್ಥಳ ಅವರಿಗೆ ಹರಿದಾಸ ಗಾಂಭೀರ ಧರ್ಮಸ್ಥಳ ಮತ್ತು ನಿವೃತ್ತ ಶಿಕ್ಷಕ, ಕಲಾವಿದ ಭಾಸ್ಕರ ಶೆಟ್ಟಿ ಪುತ್ತೂರು ನುಡಿ ನಮನ ಅರ್ಪಿಸಿದರು. ನಿವೃತ್ತ ತಹಶೀಲ್ದಾರ್, ಕಲಾವಿದ ಸುರೇಶ ಕುದ್ರಂತ್ತಾಯ ಉಜಿರೆ ಯಕ್ಷಗಾನ ಶೈಲಿಯಲ್ಲಿ ನರೇಂದ್ರರ ಜೀವನ ಗಾಥೆಯನ್ನು ಹಾಡಿದರು.

ಕಲಾವಿದ ಅಂಬಾ ಪ್ರಸಾದ್ ಪಾತಾಳ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್,ಸಿದ್ದಾಂತ ಕೀರ್ತಿರಾಜ, ಕೆ.ಪುರಂದರ ರಾವ್ ದೊಂಡೊಳೆ, ರತ್ನವರ್ಮ ಜೈನ್, ರವೀಂದ್ರ ಶೆಟ್ಟಿ ಬಳಂಜ, ವಿದ್ಯಾ ಕುಮಾರ್ ಕಾಂಚೋಡು, ಜಯರಾಮ ನೆಲ್ಲಿತ್ತಾಯ, ವಿಷ್ಣುಮೂರ್ತಿ ಭಟ್, ಬಿ.ಶಶಿಧರ, ಯಕ್ಷ ಭಾರತಿ ಸಂಚಾಲಕ ಮಹೇಶ್ ಕನ್ಯಾಡಿ, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಸುದರ್ಶನ್ ಕೆ. ವಿ ಕನ್ಯಾಡಿ, ಶಶಿಧರ ಕನ್ಯಾಡಿ, ಬಿ.ಜನಾರ್ದನ ತೋಳ್ಪಡಿತ್ತಾಯ ಉಜಿರೆ, ಶಶಿಧರ ಉಪಾಧ್ಯಾಯ, ಕೌಸ್ತುಭ ಕನ್ಯಾಡಿ, ಚಂದ್ರಾವತಿ,ವೇದಾವತಿ, ಕೆ.ರಾಮಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಯಕ್ಷ ಭಾರತಿ ಕನ್ಯಾಡಿ ತಂಡದಿಂದ ಶ್ರೀ ಮಹಾಭಾರತ ಸರಣಿಯ 83, 84,85 ನೇ ಕಾರ್ಯಕ್ರಮವಾಗಿ ಕರ್ಮಬಂಧ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ ವೇಣೂರು ತಂಡದಿಂದ ಸಹದೇವ ದಿಗ್ವಿಜಯ, ಶ್ರೀ ಪಂಚ ದುರ್ಗಾ ಯಕ್ಷಗಾನ ಸಂಘ ಕೊಯ್ಯೂರು ತಂಡದಿಂದ ಶಲ್ಯಾವಸಾನ ತಾಳಮದ್ದಳೆ ಜರಗಿತು.

ಶ್ರೀನಿವಾಸ ರಾವ್ ಕಲ್ಮಂಜ ಏಕತಾ ಗೀತೆ ಹಾಡಿದರು.ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಸ್ವಾಗತಿಸಿದರು. ತುಳು ಶಿವಳ್ಳಿ ಸಭಾದ ಕಾರ್ಯದರ್ಶಿ ಕೆ. ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.

Exit mobile version