ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಪೇಜ್ ಅನಧಿಕೃತವಾಗಿ ದೇವಾಲಯದ ಮಾಹಿತಿ ಪ್ರಕಟಿಸಿ ಭಕ್ತಾದಿಗಳಿಂದ ಸೇವಾ ಶುಲ್ಕ ವಸೂಲ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಅವರು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಡುವ ದೇವಸ್ಥಾನದ ಮಾಹಿತಿಯನ್ನು ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅನಧಿಕೃತವಾಗಿ ಬಳಸಿಕೊಂಡು ಭಕ್ತಾದಿಗಳನ್ನು ದಾರಿ ತಪ್ಪಿಸಿ ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಭಕ್ತರು ದೇವಸ್ಥಾನದ ಸೇವೆಗಾಗಿ ಆನ್‌ಲೈನ್ ಮೂಲಕ ₹150 ಪಾವತಿಸಬೇಕೆಂದು ತಿಳಿಸಿ ಮೋಸ ಮಾಡಲಾಗುತ್ತಿತ್ತು.
ಘಟನೆ ಪತ್ತೆ ಹಚ್ಚಿದ ವಿಧಾನ: ಆಗಸ್ಟ್ 26ರಂದು ಭಕ್ತರಿಂದ 150 ರೂ. ಸಂಗ್ರಹಿಸಿದ ಅಪಾದಿತರು ಸೌತಡ್ಕ ದೇವಸ್ಥಾನಕ್ಕೆ ಬಂದು, ದೇವಸ್ಥಾನದಲ್ಲಿ ಯಾವುದೇ ಸೇವಾ ರಶೀದಿ ಮಾಡದೆ ಅರ್ಚಕರ ಮೂಲಕ ದೇವರಿಗೆ ಅರ್ಚನೆ ಮಾಡಿಸಿ ಅದರ ವಿಡಿಯೋವನ್ನು ತೆಗೆಯುತ್ತಿದ್ದ ವೇಳೆ ಈ ಘಟನೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ಬಂತು.
ತಕ್ಷಣ ಸಮಿತಿಯವರು ವಿಷಯವನ್ನು ಪರಿಶೀಲಿಸಿ ನಾಲ್ವರು ಅಪಾದಿತರನ್ನು ಸ್ಥಳದಲ್ಲೇ ಹಿಡಿದು ಧರ್ಮಸ್ಥಳ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ, ದೇವಸ್ಥಾನದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಭಕ್ತರನ್ನು ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೇವಸ್ಥಾನ ಸಮಿತಿ ಹಾಗೂ ಆಡಳಿತ ಮಂಡಳಿ ಕಠಿಣ ನಿಲುವು ಕೈಗೊಂಡಿದೆ.